ಮಂಗಳೂರು: ರಾಜ್ಯದಲ್ಲಿ ಹತ್ಯೆಗಳ ಸರಣಿ ನಡೆದ ಬಳಿಕ ಯುಪಿ ಮಾಡೆಲ್ ತರಲಾಗುವುದು ಎಂದು ಸಿಎಂ ಬೊಮ್ಮಾಯಿ ಹೇಳುತ್ತಿದ್ದಾರೆ. ಹಾಗಾದರೆ ಬೊಮ್ಮಾಯಿ ಮಾಡೆಲ್ ವಿಫಲವಾಯ್ತು ಎಂದು ಒಪ್ಪಿಕೊಂಡಿದ್ದಾರಾ? ಎಂದು ವಿಪಕ್ಷ ಉಪನಾಯಕ ಯು.ಟಿ. ಖಾದರ್ ಪ್ರಶ್ನಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಯುಪಿ ಮಾಡೆಲ್ ತರುತ್ತೇವೆ ಅಂದರೆ ಕರ್ನಾಟಕ ಮಾಡೆಲ್ ವಿಫಲವಾಗಿದೆ ಎಂದು ಅರ್ಥ. ಇತರ ರಾಜ್ಯಗಳಿಗೆ ಕರ್ನಾಟಕ ಮಾಡೆಲ್ ಆಗಬೇಕು. ನಾರಾಯಣಗುರುಗಳ, ಬಸವಣ್ಣನವರ ತತ್ತ್ವಗಳನ್ನು ಅಳವಡಿಸಿ, ಅಂಬೇಡ್ಕರ್ ಅವರು ಬರೆದ ಸಂವಿಧಾನ ದಂತೆ ಆಡಳಿತ ನಡೆಸಲಿ. ಮೊದಲು ಗುಜರಾತ್ ಮಾಡೆಲ್ ಅನ್ನುತ್ತಿದ್ದರು. ಈಗ ಗುಜರಾತ್ ಮಾಡೆಲ್ ಸುದ್ದಿ ಇಲ್ಲ. ಈಗ ಯುಪಿ ಮಾಡೆಲ್ ಅನ್ನುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಕಳೆದ ಹತ್ತು ದಿನಗಳಿಂದ ದ.ಕ ಜಿಲ್ಲೆಯಲ್ಲಿ ನಡೆದ ವಿವಿಧ ಘಟನೆಯಲ್ಲಿ ಮೂರು ಯುವಕರು ಸಮಾಜಘಾತುಕ ಶಕ್ತಿಗಳಿಂದ ಹತ್ಯೆ ಆಗಿದ್ದಾರೆ. ಸಮಾಜಘಾತುಕ ಶಕ್ತಿಯಿಂದ ಹತ್ಯೆಯಾದ ಈ ಮೂರು ಕೊಲೆಗಳನ್ನೂ ಖಂಡಿಸುತ್ತೇನೆ. ಈ ಸರಣಿ ಕೊಲೆಯಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಕೆಟ್ಟ ಹೆಸರು ಬಂದಿದೆ. ಸರ್ಕಾರ ಹಾಗೂ ಪೊಲೀಸ್ ಇಲಾಖೆ ಈ ಮೂರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ವಿಶೇಷ ತನಿಖೆ ನಡೆಸಬೇಕು. ನೈಜ ಆರೋಪಿಗಳು ಯಾರೇ ಇರಲಿ, ಸಂಘಟನೆ ಇರಲಿ ಪೊಲೀಸ್ ಇಲಾಖೆ ಮಟ್ಟ ಹಾಕಬೇಕು. ರಾಜಕೀಯಕ್ಕಾಗಿ ನಿರಪರಾಧಿಗಳಿಗೆ ತೊಂದರೆ ಆಗಬಾರದು ಎಂದರು.
ಮುಖ್ಯಮಂತ್ರಿಗಳು ಹತ್ಯೆಯಾದ ಒಂದು ಕಡೆಗೆ ಮಾತ್ರ ಭೇಟಿ ನೀಡಿದ್ದಾರೆ. ಒಂದು ಕಡೆ ಮಾತನಾಡಿ ಪರಿಹಾರ ಕೊಡುತ್ತಾರೆ, ಮತ್ತೊಂದು ಕಡೆ ಭೇಟಿ ಇಲ್ಲ ಪರಿಹಾರವೂ ಇಲ್ಲ. ಇದು ಯಾವ ರೀತಿ ಪ್ರಜಾಪ್ರಭುತ್ವದ ಸರ್ಕಾರ. ಪ್ರತಿ ತಾಯಿಗೂ ಮಕ್ಕಳನ್ನು ಕಳೆದುಕೊಂಡಾಗ ಆಗುವ ನೋವು ಒಂದೇ ತರದು. ಆ ನೋವು ಸರ್ಕಾರಕ್ಕೆ ಇಲ್ಲ.
ನೀವು ಪರಿಹಾರ ಕೊಡೋದು ಸರ್ಕಾರದ ದುಡ್ಡು, ನಿಮ್ಮ ಕಿಸೆಯ ದುಡ್ಡು ಅಲ್ಲ. ಜನರ ಟ್ಯಾಕ್ಸ್ಯ್ನಿಂದ ಕೊಡುವ ಹಣ ಅದು. ಸಂವಿಧಾನದಲ್ಲಿ ಒಬ್ಬರಿಗೆ ಒಂದು ನ್ಯಾಯ ಇನ್ನೊಬ್ಬರಿಗೆ ಇನ್ನೊಂದು ನ್ಯಾಯನಾ?. ಹೀಗೆ ಆದರೆ ಮುಖ್ಯಮಂತ್ರಿ ಸ್ಥಾನಕ್ಕೆ ಕಪ್ಪು ಚುಕ್ಕೆಯಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ: ಜನ್ಮ ದಿನದಂದೇ ಮಣ್ಣಾದ ಫಾಜಿಲ್... ಮಗನ ಹುಟ್ಟಹಬ್ಬ ಆಚರಿಸಬೇಕಿದ್ದ ಪೋಷಕರಿಂದ ಅಂತ್ಯಸಂಸ್ಕಾರ
ಸರ್ಕಾರ ಮತ್ತು ಮುಖ್ಯಮಂತ್ರಿ ಮತಾಂಧ ಶಕ್ತಿಗಳಿಗೆ ಹೆದರುತ್ತಿದ್ದಾರೆ. ಅವರಿಗೆ ಹೆದರಿ ನಿರ್ಭಯವಾಗಿ ಕೆಲಸ ಮಾಡುತ್ತಿಲ್ಲ. ಮುಖ್ಯಮಂತ್ರಿ, ಗೃಹ ಸಚಿವರು ಬಂದಾಗ ಗಲಭೆ ಕಡಿಮೆ ಆಗುತ್ತದೆ. ಆದರೆ ಇಲ್ಲಿ ಮುಖ್ಯಮಂತ್ರಿ ಬಂದು ವಿಮಾನ ಹತ್ತುವ ಮೊದಲೇ ಮರ್ಡರ್ ಆಗಿದೆ. ಸರ್ಕಾರ ಮುಂಜಾಗ್ರತೆ ವಹಿಸದಿದ್ದ ಕಾರಣ, ಈ ಹತ್ಯೆಗಳು ನಡೆಯುತ್ತಿವೆ. ಸರ್ವ ಜನರಿಗೂ ಧೈರ್ಯ ತುಂಬುವ ಕೆಲಸ ಸರ್ಕಾರ ಮಾಡುತ್ತಿಲ್ಲ ಎಂದು ಕಿಡಿಕಾರಿದರು.