ಬೆಳ್ತಂಗಡಿ(ದಕ್ಷಿಣ ಕನ್ನಡ): ಧರ್ಮಸ್ಥಳ ಸಮೀಪದ ಅಶೋಕ್ ನಗರ ಎಂಬಲ್ಲಿರುವ ಗಿರಿಜನ ಆಶ್ರಮ ಶಾಲೆಯನ್ನು ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಬರುವಂತ ಜನರನ್ನು ಕ್ವಾರಂಟೈನ್ ಮಾಡಲು ನಿಗದಿಪಡಿಸಿರುವುದರ ಬಗ್ಗೆ ಸ್ಥಳೀಯ ನಿವಾಸಿಗಳು ತೀವ್ರ ವಿರೋಧ ವ್ಯಕ್ತಪಡಿಸಿ ಧರ್ಮಸ್ಥಳ ಗ್ರಾಮ ಪಂಚಾಯತ್ ಗೆ ಮನವಿ ಸಲ್ಲಿಸಿದ್ದಾರೆ.
ಧರ್ಮಸ್ಥಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಶೋಕ ನಗರದಲ್ಲಿ ಗಿರಿಜನ ಆಶ್ರಮ ಶಾಲೆ ಇದೆ. ಅದರ ಅಕ್ಕ ಪಕ್ಕದಲ್ಲಿ ಸುಮಾರು 120 ಮನೆಗಳಿದ್ದು, ವಯಸ್ಕರು, ಹಿರಿಯರು ಹಾಗೂ ಮಕ್ಕಳು ಸೇರಿ ತುಂಬ ಮಂದಿ ವಾಸವಾಗಿದ್ದು, ಅವರ ಸುರಕ್ಷತೆ ದೃಷ್ಟಿಯಿಂದ ಈ ಪ್ರದೇಶಲ್ಲಿರುವ ಗಿರಿಜನ ಆಶ್ರಮ ಶಾಲೆಯಲ್ಲಿ ಹೊರ ರಾಜ್ಯ ಹಾಗೂ ಜಿಲ್ಲೆಗಳಿಂದ ಆಗಮಿಸುವಂತಹ ಜನರನ್ನು ಕ್ವಾರಂಟೈನ್ ಮಾಡಲು ಹೊರಟಿರುವುದು ಖಂಡನೀಯ. ಒಂದುವೇಳೆ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಈ ಬಗ್ಗೆ ಪಂಚಾಯತ್ ಅಧಿಕಾರಿಯವರಲ್ಲಿ ಮಾತನಾಡಿ, ಈ ಆಶ್ರಮ ಶಾಲೆಯ ಸುತ್ತ ಕಾಂಪೌಂಡ್ ಗಳಿದ್ದು, ಕ್ವಾರಂಟೈನ್ ಇಡಲು ಸೂಕ್ತ ಜಾಗ ಎಂದು ಈ ಸ್ಥಳವನ್ನು ನಿಗದಿಪಡಿಸಿರುತ್ತೇವೆ. ಸ್ಥಳೀಯ ನಿವಾಸಿಗಳಿಗೆ ಈ ಬಗ್ಗೆ ಸರಿಯಾದ ಮಾಹಿತಿಯನ್ನೂ ನೀಡಿದ್ದೇವೆ. ಅದರೂ, ಸ್ಥಳೀಯ ನಿವಾಸಿಗಳ ವಿರೋಧ ಇದ್ದಲ್ಲಿ ಪಂಚಾಯತ್ ನಲ್ಲಿ ಇದರ ಬಗ್ಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಸ್ಥಳೀಯ ಕಾಲೋನಿಯ ನಿವಾಸಿಗಳಿಗೆ ಯಾರೋ ನೀಡಿದ ತಪ್ಪು ಮಾಹಿತಿಯೇ ಈ ರೀತಿ ವಿರೋಧಕ್ಕೆ ಕಾರಣವಾಗಿದ್ದು, ಈ ಬಗ್ಗೆ ಗ್ರಾಮ ಪಂಚಾಯತ್ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅಭಿವೃದ್ದಿ ಆಧಿಕಾರಿ ತಿಳಿಸಿದ್ದಾರೆ.