ಸುಳ್ಯ : ಶಿರಾ ಹಾಗೂ ರಾಜರಾಜೇಶ್ವರಿ ನಗರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಎದುರಿಸಲು ಸಾಧ್ಯವಾಗದ ಹಿನ್ನೆಲೆ ಬಿಜೆಪಿ ಸರ್ಕಾರವು ನಮ್ಮ ನಾಯಕ ಡಿ ಕೆ ಶಿವಕುಮಾರ್ ಮನೆ ಮೇಲೆ ಸಿಬಿಐ ಬಿಟ್ಟು ಅವರ ಪ್ರಭಾವ ಕುಗ್ಗಿಸುವ ಕುತಂತ್ರ ನಡೆಸುತ್ತಿದೆ. ಬಿಜೆಪಿ ಸರ್ಕಾರದ ಈ ನೀತಿಯನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ ಎಂದು ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ಧನಂಜಯ ಅಡ್ಪಂಗಾಯ ಹೇಳಿದರು.
ಇಂದು ಸುಳ್ಯದಲ್ಲಿ ಕಾಂಗ್ರೆಸ್ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. 2017 ರಿಂದ ಡಿ ಕೆ ಶಿವಕುಮಾರ್ಗೆ ಇಲ್ಲಿಯ ತನಕ ಐಟಿ, ಇಡಿ, ಜಾರಿ ನಿರ್ದೇಶನಾಲಯ ಹೀಗೆ ಒಂದರ ಮೇಲೊಂದರಂತೆ ಅಧಿಕಾರಿಗಳ ತಂಡವನ್ನು ಕಳುಹಿಸಿ ತನಿಖೆ ನಡೆಸಲಾಗುತ್ತಿದೆ. ಎಲ್ಲಿಯೂ ಈ ತನಕ ಅಪರಾಧ ಮಾತ್ರ ಸಾಬೀತಾಗಿಲ್ಲ. ಈಗ ಮತ್ತೊಮ್ಮೆ ಸಿಬಿಐ ಬಿಟ್ಟು ಸರ್ಕಾರವು ತೇಜೋವಧೆಗೆ ಮುಂದಾಗಿದೆ ಎಂದು ಅವರು ಹೇಳಿದರು.
ಮೋದಿ, ಅಮಿತ್ ಶಾರಿಗೆ ಈ ದೇಶದಲ್ಲಿ ಡಿ ಕೆ ಶಿವಕುಮಾರ್ ಮಾತ್ರ ಕಾಣುತ್ತಿದ್ದಾರಾ.. ಆರ್ಥಿಕ ಅಪರಾಧ ಮಾಡಿ ಓಡಿ ಹೋದವರು ಕಾಣುತ್ತಿಲ್ಲವೇ ಎಂದು ಪ್ರಶ್ನಿಸಿದರು. ಸರ್ಕಾರ ಏನೇ ಕುತಂತ್ರ ನಡೆಸಿದ್ರೂ ನಮ್ಮ ನಾಯಕ ಡಿ ಕೆ ಶಿವಕುಮಾರ್ ಎದೆಗುಂದದೆ ಎಲ್ಲವನ್ನೂ ಎದುರಿಸಿದ್ದಾರೆ.
ಮುಂದೆಯೂ ಅದೇ ತರಹ ಇರುತ್ತದೆ. ಅವರಿಗೆ ನಾವೆಲ್ಲರೂ ಬೆಂಬಲವಾಗಿ ನಿಲ್ಲುತ್ತೇವೆ ಎಂದು ಹೇಳಿದ ಅವರು, ಸರ್ಕಾರದ ವಿರುದ್ಧ ಯಾರೇ ಮಾತನಾಡಿದ್ರೂ ಅವರನ್ನು ಧಮನಿಸುವ ಕೆಲಸ ನಿರಂತರವಾಗಿ ಬಿಜೆಪಿ ಸರ್ಕಾರದಿಂದ ಆಗುತ್ತಿದೆ ಎಂದು ಕಿಡಿಕಾರಿದರು. ಹಿರಿಯ ನಾಯಕ ಭರತ್ ಮುಂಡೋಡಿ ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜಯಪ್ರಕಾಶ್ ರೈ ಹಾಗೂ ಕಾಂಗ್ರೆಸ್ ನಾಯಕರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.