ಪುತ್ತೂರು: ಅಂತಾರಾಜ್ಯ ಗಾಂಜಾ ಸಾಗಾಟದ ಬೃಹತ್ ಜಾಲವೊಂದನ್ನು ಪತ್ತೆ ಹಚ್ಚಿರುವ ಪುತ್ತೂರು ಪೊಲೀಸರು ಮೂವರು ಆರೋಪಿಗಳನ್ನು ದಸ್ತಗಿರಿ ಮಾಡಿ ಅಪಾರ ಪ್ರಮಾಣದ ಗಾಂಜಾ ವಶಪಡಿಸಿಕೊಂಡಿದ್ದು, ಎರಡು ವಾಹನಗಳನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ.
ಪುತ್ತೂರು ನಗರ ಠಾಣಾ ವ್ಯಾಪ್ತಿಯಲ್ಲಿ ಬರುವ ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಪಾಟ್ರಕೋಡಿ ಎಂಬಲ್ಲಿ ಮಂಗಳವಾರ ಈ ಜಾಲವನ್ನು ನಗರ ಠಾಣಾ ಇನ್‌ಸ್ಪೆಕ್ಟರ್ ತಿಮ್ಮಪ್ಪ ನಾಯ್ಕ್ ಅವರ ನೇತೃತ್ವದ ಪೊಲೀಸರ ತಂಡ ಪತ್ತೆ ಹಚ್ಚಿದೆ. 17,50,000 ರೂ. ಮೌಲ್ಯದ 175 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದ್ದು, 3 ಲಕ್ಷ ರೂ. ಮೌಲ್ಯದ ಪಿಕಪ್ ವಾಹನ ಮತ್ತು 4 ಲಕ್ಷ ರೂ. ಮೌಲ್ಯದ ಕಾರು ಹಾಗೂ ಮೂರು ಮೊಬೈಲ್ ಫೋನ್‌ಗಳನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ.
ಕಾಸರಗೋಡು ಜಿಲ್ಲೆಯ ಮಂಜೇಶ್ವರದ ದೂಮಕ್ಕಾಡ್ ನಿವಾಸಿ ಇಬ್ರಾಹಿಂ ಯಾನೆ ಅರ್ಷದ್ ಯಾನೇ ಅಚ್ಚು (26), ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಹೊಸಂಗಡಿಯ ಮಿಜಿರ್‌ಪಳ್ಳ ನಿವಾಸಿ ಮಹಮ್ಮದ್ ಶಫೀಕ್ (31) ಮತ್ತು ಬಂಟ್ವಾಳ ತಾಲೂಕು ಕನ್ಯಾನದ ಮಡಕುಂಜ ನಿವಾಸಿ ಖಲಂದರ್ ಶಾಫಿ (26) ಎಂಬವರನ್ನು ಬಂಧಿಸಲಾಗಿದೆ. ಇವರ ಪೈಕಿ ಇಬ್ರಾಹಿಂ ಅರ್ಷದ್ ಮೇಲೆ ಮಂಜೇಶ್ವರ ಠಾಣೆಯಲ್ಲಿ 7 ಪ್ರಕರಣ, ಕುಂಬಳೆ ಠಾಣೆಯಲ್ಲಿ ಈಗಾಗಲೇ 2 ಪ್ರಕರಣಗಳು ದಾಖಲಾಗಿವೆ. ಖಲಂದರ್ ಶಾಫಿ ಮೇಲೆ ವಿಟ್ಲ ಠಾಣೆಯಲ್ಲಿ 2 ಗಾಂಜಾ ಪ್ರಕರಣ, 1 ಕೊಲೆ ಯತ್ನ ಪ್ರಕರಣ, ಕಾವೂರು ಠಾಣೆಯಲ್ಲಿ ಒಂದು ಗಾಂಜಾ ಪ್ರಕರಣ ದಾಖಲಾಗಿದೆ.
ಇದೊಂದು ಅಂತಾರಾಜ್ಯ ಗಾಂಜಾ ಸಾಗಾಟ ಜಾಲವಾಗಿದ್ದು, ಇದರ ಹಿಂದೆ ದೊಡ್ಡದೊಂದು ನೆಟ್‌ವರ್ಕ್ ಕೆಲಸ ಮಾಡುತ್ತಿದೆ ಎಂಬ ಸಂಶಯ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ ಎಂದು ಇನ್‌ಸ್ಪೆಕ್ಟರ್ ತಿಮ್ಮಪ್ಪ ನಾಯ್ಕ್ ತಿಳಿಸಿದ್ದಾರೆ.