ಬಂಟ್ವಾಳ: ಬಂಟ್ವಾಳ ತಾಲೂಕಿನ ಕಾವಳಮುಡೂರು ಗ್ರಾಮದ ಕಾರಿಂಜೇಶ್ವರ ದೇವಸ್ಥಾನಕ್ಕೆ ತೆರಳಿದ ಐವರು ವಿದ್ಯಾರ್ಥಿಗಳನ್ನು ಅಡ್ಡಗಟ್ಟಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪುಂಜಾಲಕಟ್ಟೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಇಬ್ಬರು ಯುವತಿಯರು ಮತ್ತು ಮೂವರು ಯುವಕರು ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಅಂತಿಮ ವರ್ಷದ ಪ್ಯಾರಾ ಮೆಡಿಕಲ್ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇವರು ಗುರುವಾರ ಸಂಜೆ ಟ್ರಿಪ್‌ಗೆಂದು ದ್ವಿಚಕ್ರ ವಾಹನದಲ್ಲಿ ಬಂಟ್ವಾಳ ತಾಲೂಕು ಕಾವಳಮುಡೂರು ಗ್ರಾಮದ ಕಾರಿಂಜೇಶ್ವರ ದೇವಸ್ಥಾನಕ್ಕೆ ಬಂದಿದ್ದರು. ದೇವಸ್ಥಾನದಲ್ಲಿ ಫೋಟೋಗಳನ್ನು ತೆಗೆದ ಬಳಿಕ ಮರಳಿ ಮನೆಗೆ ಹೋಗುವಾಗ ಘಟನೆ ಜರುಗಿದೆ.
ದೇವಸ್ಥಾನದ ಕೆರೆಯ ಬಳಿ ಸುಮಾರು 6 ಗಂಟೆಯ ವೇಳೆ ಐವರು ಅಪರಿಚಿತ ಯುವಕರ ಗುಂಪೊಂದು ಇವರನ್ನು ತಡೆದು ನಿಲ್ಲಿಸಿ ಪ್ರಶ್ನಿಸಿದ್ದಾರಂತೆ. ಈ ವಿಚಾರವನ್ನು ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ದೂರು ಆಧರಿಸಿ ಮೂವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿದ್ದಾರೆ.