ಮಂಗಳೂರು: ಹೊಸ ವರ್ಷ ಆಗಮಿಸುತ್ತಿರುವ ನಡುವೆಯೇ ನ್ಯೂ ಇಯರ್ ಪಾರ್ಟಿ ಮೇಲೆ ಬಜರಂಗದಳ ಕೆಂಗಣ್ಣು ಬೀರಿದೆ. ಪಾರ್ಟಿಗಳಿಗೆ ಅನ್ಯಕೋಮಿನ ಯುವಕರಿಗೆ ಪ್ರವೇಶ ನೀಡದಂತೆ ಭಜರಂಗದಳ ಆಗ್ರಹಿಸಿದೆ. ಪಬ್, ಕ್ಲಬ್, ಹೋಟೆಲ್ಗಳಲ್ಲಿ ಹೊಸ ವರ್ಷಾಚರಣೆಯ ಪಾರ್ಟಿಗಳ ಆಯೋಜನೆ ಸಿದ್ಧತೆ ನಡೆಯುತ್ತಿರುವ ಮಧ್ಯೆ ಈ ಆಕ್ಷೇಪ ವ್ಯಕ್ತವಾಗಿದೆ.
ಬಜರಂಗದಳದಿಂದ ಎಚ್ಚರಿಕೆ: ಡಿಸೆಂಬರ್ 31ರಂದು ನಡೆಯುವ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಬಿಂಬಿಸುವ ಪಾರ್ಟಿಗಳ ವಿರುದ್ಧ ಬಜರಂಗದಳ ಆಕ್ರೋಶ ವ್ಯಕ್ತಪಡಿಸಿದೆ. ಈಗಾಗಲೇ ಪಾರ್ಟಿಗಳನ್ನು ರಾತ್ರಿ 11ರೊಳಗೆ ಮುಗಿಸುವಂತೆ ಬಜರಂಗದಳ ಪೊಲೀಸ್ ಕಮಿಷನರ್ ಅವರಿಗೆ ಮನವಿ ಮಾಡಿದೆ. ಇಲ್ಲದಿದ್ದಲ್ಲಿ ನಮ್ಮ ಕಾರ್ಯಕರ್ತರೇ ಪಾರ್ಟಿಗಳನ್ನು ಬಂದ್ ಮಾಡಿಸುತ್ತಾರೆ ಎಂದು ಬಜರಂಗದಳ ಎಚ್ಚರಿಕೆ ನೀಡಿದೆ.
ಅನ್ಯಕೋಮಿನ ಯುವಕರಿಗೆ ಪ್ರವೇಶ ನೀಡದಂತೆ ಒತ್ತಾಯ: ಬಜರಂಗದಳದ ಮುಖಂಡ ಪುನೀತ್ ಅತ್ತಾವರ ಮಾತನಾಡಿ, ಪಾರ್ಟಿ ನೆಪದಲ್ಲಿ ಹೋಟೆಲ್, ಪಬ್ಗಳಲ್ಲಿ ಲವ್ ಜಿಹಾದ್, ಡ್ರಗ್ಸ್ ಜಿಹಾದ್ ನಡೆಯುತ್ತಿದೆ. ಈ ಮೂಲಕ ದುಶ್ಚಟಗಳಿಗೆ ಪ್ರೇರಣೆ ನೀಡಲಾಗುತ್ತಿದೆ. ಅನ್ಯಕೋಮಿನ ಯುವಕರಿಗೆ ಅವರ ಧರ್ಮದ ಪ್ರಕಾರ ಅವರಿಗೆ ಪಾರ್ಟಿಗಳು, ಸಂಗೀತ ನಿಷಿದ್ಧವಾಗಿವೆ. ಆದರೆ ಮಂಗಳೂರಿನ ಎಲ್ಲಾ ಪಬ್ಗಳಲ್ಲಿ ಆ ಯುವಕರು ಕಾಣಸಿಗುತ್ತಾರೆ. ಆದ್ದರಿಂದ ಎಲ್ಲಾ ಪಬ್, ಹೋಟೆಲ್ ಮಾಲೀಕರು ಯಾವುದೇ ಹೊಸ ವರ್ಷಾಚರಣೆಯ ಪಾರ್ಟಿಗಳಿಗೆ ಅನ್ಯಕೋಮಿನ ಯುವಕರಿಗೆ ಪ್ರವೇಶ ನೀಡದಂತೆ ಆಗ್ರಹಿಸಿದರು.
ಕಾನೂನು ಸುವ್ಯವಸ್ಥೆ ಇಲ್ಲ: ಈ ಬಗ್ಗೆ ಎಸ್ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಪ್ರತಿಕ್ರಿಯೆ ನೀಡಿದ್ದು, ಈ ರೀತಿ ಎಚ್ಚರಿಕೆ ನೀಡಲು ಬಜರಂಗದಳದವರು ಯಾರು?. ದ.ಕ.ಜಿಲ್ಲೆಯಲ್ಲಿ ಸರ್ಕಾರವೇ ಇಲ್ಲ. ಕಾನೂನು ಸುವ್ಯವಸ್ಥೆ ಇಲ್ಲ. ಪೊಲೀಸ್ ಇಲ್ಲ ಅನ್ನುವಂಥದ್ದೇ ಇದರ ಹಿಂದಿರುವ ಅರ್ಥವಾಗಿದೆ. ಪೊಲೀಸ್ ಇಲಾಖೆ ನ್ಯೂ ಈಯರ್ ಪಾರ್ಟಿಯ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿ. ಸಂವಿಧಾನ ಎಲ್ಲರಿಗೂ ಅವರದ್ದೇ ಆದ ಸ್ವಾತಂತ್ರ್ಯ ನೀಡಿದೆ.
ಇದನ್ನೂ ಓದಿ: ಮಂಗಳೂರಲ್ಲಿನ ಗೂಂಡಾಗಿರಿ ಬಗ್ಗೆ ಅಧಿವೇಶನದಲ್ಲಿ ಪ್ರತಿಪಕ್ಷಗಳು ಗಂಭೀರ ಚರ್ಚೆ ನಡೆಸಲಿ: ಎಸ್ಡಿಪಿಐ ಒತ್ತಾಯ
ಸಂವಿಧಾನ ನೀಡಿರುವ ಸ್ವಾತಂತ್ರ್ಯ ಹಾಗೂ ಹಕ್ಕನ್ನು ಕಾಪಾಡುವುದು ಪೊಲೀಸ್ ಇಲಾಖೆಯ ಜವಾಬ್ದಾರಿಯಾಗಿದೆ. ಕಾನೂನು ಸುವ್ಯವಸ್ಥೆಯನ್ನು ಹದಗೆಡಿಸುವಂತಹ ಹೇಳಿಕೆ ನೀಡುವ ಬಜರಂಗದಳದವರ ಮೇಲೆ ಪ್ರಕರಣ ದಾಖಲು ಮಾಡಿ ಅವರನ್ನು ಮುಂಜಾಗ್ರತಾ ಕ್ರಮವಾಗಿ ಬಂಧಿಸಲಿ ಎಂದು ಹೇಳಿದರು.