ಮಂಗಳೂರು (ದಕ್ಷಿಣ ಕನ್ನಡ) : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ಮಾನಹಾನಿಕಾರ ಹೇಳಿಕೆ ನೀಡಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಈ ಸಂಬಂಧ ಹರೀಶ್ ಪೂಂಜಾ ಕ್ಷಮೆಯಾಚಿಸದಿದ್ದರೆ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್ ಹೇಳಿದರು.
ಗುರುವಾರ ನಗರದ ಮಲ್ಲಿಕಟ್ಟೆಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಶಾಸಕ ಹರೀಶ್ ಪೂಂಜಾ ಅವರು ಸಿದ್ದರಾಮಯ್ಯ ಅವರು 24 ಕೊಲೆ ಮಾಡಿದ್ದಾರೆ ಎಂಬ ಮಾನಹಾನಿಕಾರ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ವಿವಿಧ ಕಡೆಗಳಲ್ಲಿ ನಮ್ಮ ಕಾರ್ಯಕರ್ತರು ದೂರು ದಾಖಲಿಸಿದ್ದಾರೆ. ತಾವು ನೀಡಿರುವ ಹೇಳಿಕೆ ಬಗ್ಗೆ ಹರೀಶ್ ಪೂಂಜಾ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಇಲ್ಲದೆ ಇದ್ದಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಅವರ ವಿರುದ್ಧ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣ ದಾಖಲಿಸಿ ಮಾನನಷ್ಟ ಮೊಕದ್ದಮೆ ಹೂಡಲಾಗುವುದು. ಈ ಬಗ್ಗೆ ಈಗಾಗಲೇ ನಮ್ಮ ಕಾನೂನು ಘಟಕದ ಜೊತೆಗೆ ಮಾತುಕತೆ ನಡೆಸಲಾಗಿದ್ದು, ಅವರು ಪ್ರಕರಣ ದಾಖಲಿಸಿಕೊಳ್ಳಲು ತಯಾರಿ ನಡೆಸುತ್ತಿದ್ದಾರೆ ಎಂದು ಹರೀಶ್ ಕುಮಾರ್ ಹೇಳಿದರು.
ಈ ಹಿಂದೆ ಬಂಟ್ವಾಳದಲ್ಲಿ ನಡೆದ ಶರತ್ ಮಡಿವಾಳ ಕೊಲೆಯನ್ನು ಯಾರ ತಲೆಗೆ ಕಟ್ಟಿದ್ದರು ಎಂಬುದು ಗೊತ್ತಿದೆ. ಪುತ್ತೂರಿನಲ್ಲಿ ಪ್ರವೀಣ್ ನೆಟ್ಟಾರು ಹತ್ಯೆ ಯಾರು ಮಾಡಿದ್ದಾರೆ ಎಂದು ಹಿಂದೂ ಕಾರ್ಯಕರ್ತರೇ ಹೇಳಿದ್ದರು. ಈ ವೇಳೆ ನಳಿನ್ ಕುಮಾರ್ ಕಟೀಲ್ ಅವರ ವಾಹನವನ್ನು ಬುಡಮೇಲು ಮಾಡುವ ಪ್ರಯತ್ನ ನಡೆದಿತ್ತು. ಇಷ್ಟೆಲ್ಲ ಇದ್ದರೂ ವಿನಾಕಾರಣ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಹರೀಶ್ ಕುಮಾರ್ ಕಿಡಿಕಾರಿದರು.
ಮೂರು ಮುಕ್ಕಾಲು ವರ್ಷ ಹರೀಶ್ ಪೂಂಜಾ ಅವರ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು. ಸಿದ್ದರಾಮಯ್ಯ 24 ಮಂದಿ ಹಿಂದೂ ಕಾರ್ಯಕರ್ತರ ಕೊಲೆ ಮಾಡಿದ್ದಾರೆ ಎಂದು ಹೇಳುವ ಹರೀಶ್ ಪೂಂಜಾ ಅವರ ಸರ್ಕಾರದ ಅವಧಿಯಲ್ಲಿ ಯಾಕೆ ತನಿಖೆ ನಡೆಸಲಿಲ್ಲ. 40 % ಕಮೀಷನ್ ಹಣ ಲೆಕ್ಕ ಮಾಡುತ್ತಾ ಇವರಿಗೆ ಪುರುಷೊತ್ತು ಇರಲಿಲ್ಲವೆ? ಎಂದು ಹರೀಶ್ ಕುಮಾರ್ ಪ್ರಶ್ನಿಸಿದರು.
ಹರೀಶ್ ಪೂಂಜಾ ಭ್ರಷ್ಟಾಚಾರ ಮಾಡಿದ್ದಾರೆ. ನೇತ್ರಾವತಿ ಹೊಳೆಯಲ್ಲಿ ನೀರಿಲ್ಲ, ಆದರೆ ಚುನಾವಣೆಯಲ್ಲಿ ಹಣದ ಹೊಳೆ ಹರಿಸಿದ್ದಾರೆ. ರಸ್ತೆ ಕಾಂಕ್ರಿಟಿಕರಣ ಯಾವ ರೀತಿ ಆಗಿದೆ. ಅದರಲ್ಲಿ ಎಷ್ಟು ಕಮಿಷನ್ ಹೊಡೆದಿದ್ದಾರೆ ಎಂಬುದು ಬೆಳ್ತಂಗಡಿ ಜನತೆಗೆ ಗೊತ್ತಾಗಿದೆ. ರಸ್ತೆ ಮಾಡಿ ಕಮೀಷನ್ ಪಡೆದಿದ್ದಾರೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಸ್ಪಷ್ಟತೆ ಇನ್ನೂ ಆಗಿಲ್ಲ. ಅದರಲ್ಲೂ ಬಹಳಷ್ಟು ಭ್ರಷ್ಟಾಚಾರ ಆಗಿದೆ ಎಂದು ಜನರು ಮಾತಾಡುತ್ತಿದ್ದಾರೆ ಎಂದು ಹರೀಶ್ ಪೂಂಜಾ ವಿರುದ್ಧ ಹರೀಶ್ ಕುಮಾರ್ ಆರೋಪ ಮಾಡಿದರು.
ಹರೀಶ್ ಪೂಂಜಾ ಅವರು ಭ್ರಷ್ಟಾಚಾರದ ಹಣದಿಂದ ಗೆದ್ದಿದ್ದಾರೆ. ಪೊಲೀಸ್ ವ್ಯವಸ್ಥೆ ಹದಗೆಟ್ಟಿದ್ದು, ಚುನಾವಣೆ ಸಂದರ್ಭದಲ್ಲಿ ಪೊಲೀಸರನ್ನು ಬುಕ್ ಮಾಡಿದ್ದಾರೆ. ನಾವು ದೂರು ಕೊಟ್ಟರೂ ಅರ್ಧ ಗಂಟೆ ಹುಡುಕಿದರು ಪೊಲೀಸರಿಗೆ ಹಣ ಸಿಕ್ಕಿರಲಿಲ್ಲ. ಕಾಂಗ್ರೆಸ್ ನಾಯಕ ಹುಡುಕುವಾಗ ಕಾರಿನಲ್ಲಿ ಹಣ ಸಿಕ್ಕಿದೆ. ಇನ್ನು ಅವರು ಜಾಗ್ರತೆ ಮಾಡಬೇಕು. ಸರ್ಕಾರ ನಮ್ಮದು ಇದೆ. ದಮ್ಮ ತಾಕತ್ತು ಎಂದು ಹೇಳುತ್ತಿದ್ದರು. ರಾಜ್ಯದ ಮತದಾರರು ಅವರಿಗೆ ದಮ್ಮು ತಾಕತ್ತು ತೋರಿಸಿದ್ದಾರೆ ಎಂದು ಬಿಜೆಪಿ ನಾಯಕರ ಹೇಳಿಕೆಗೆ ಹರೀಶ್ ಕುಮಾರ್ ವ್ಯಂಗ್ಯವಾಡಿದರು.
ಇದನ್ನೂ ಓದಿ : ಸಿದ್ದರಾಮಯ್ಯ 24 ಹಿಂದೂ ಕಾರ್ಯಕರ್ತರ ಕೊಲೆ ಮಾಡಿದ್ದಾರೆ ಎಂಬ ಆರೋಪ: ಶಾಸಕ ಹರೀಶ್ ಪೂಂಜಾ ವಿರುದ್ಧ ದೂರು