ಮಂಗಳೂರು: ದೈವಾರಾಧಕರು ಹಿಂದೂ ಧರ್ಮಕ್ಕೆ ಸೇರಿದವರಲ್ಲ ಎಂಬ ಹೇಳಿಕೆ ನೀಡಿರುವ ನಟ ಚೇತನ್ ಮತ್ತೆ ಇದೇ ರೀತಿ ಹೇಳಿಕೆ ನೀಡುವುದನ್ನು ಮುಂದುವರೆಸಿರೆ ಕಾನೂನು ಹೋರಾಟ ನಡೆಸಲಾಗುವುದು ಎಂದು ದೈವರಾಧಕ, ತುಳು ಸಾಹಿತ್ಯ ಅಕಾಡೆಮಿಯ ನಿರ್ಗಮಿತ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್ ಎಚ್ಚರಿಕೆ ನೀಡಿದರು.
ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೈವರಾಧನೆ ಮಾಡುವ ಪರವ, ಪಂಬದ, ನಲಿಕೆ ಸಮುದಾಯದವರು ಹಿಂದೂ ಧರ್ಮದವರು. ನಾವು ಹಿಂದೂ ಧರ್ಮದವರಲ್ಲ ಎಂಬ ಚೇತನ್ ಹೇಳಿಕೆಯನ್ನು ಖಂಡಿಸುತ್ತೇವೆ. ನಮಗೆ ಸಂವಿಧಾನ ಪ್ರಕಾರ ಹಿಂದೂ ಧರ್ಮದ ಜಾತಿ ಪ್ರಮಾಣ ಪತ್ರ ಇದೆ. ನಮ್ಮನ್ನು ಹಿಂದೂ ಧರ್ಮದಿಂದ ಹೊರಗೆ ಹಾಕಿ ಸಾಯಿಸುವ ಪ್ರಯತ್ನ ಬೇಡ. ನಾವು ಸಾಗರದೊಳಗಿದ್ದು ಬದುಕುತ್ತೇವೆ. ನಮ್ಮನ್ನು ಬೇರ್ಪಡಿಸುವ ಷಡ್ಯಂತ್ರವನ್ನ ವಿರೋಧಿಸುತ್ತೇವೆ ಎಂದರು.
ಇದನ್ನೂ ಓದಿ: ನಟ ಚೇತನ್ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ಹಿಂದೂಪರ ಸಂಘಟನೆ ಮುಖಂಡರು
ಸಂವಿಧಾನಬದ್ಧವಾಗಿ ನಾವು ಹಿಂದೂಗಳು ಎಂದು ಇದೆ. ನಮ್ಮನ್ನು ಬೇರ್ಪಡಿಸುವ ಹೇಳಿಕೆ ನೀಡಿದ ನಟ ಚೇತನ್ ಕ್ಷಮೆಯಾಚಿಸಬೇಕು. ಇನ್ನು ಮುಂದೆಯೂ ಇಂತಹ ಹೇಳಿಕೆ ನೀಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಹಿಂದಿ ಹೇರಿಕೆ ಹೇಗೆ ಒಪ್ಪೋಕಾಗಲ್ವೋ ಹಿಂದುತ್ವ ಹೇರಿಕೆಯನ್ನೂ ಒಪ್ಪಲಾಗಲ್ಲ: ನಟ ಚೇತನ್