ಮಂಗಳೂರು: ನಗರದಲ್ಲಿ ಮಾದಕ ವಸ್ತು ಎಂಡಿಎಂಎ (Methylene dioxy methamphetamine) ಮಾರಾಟ ಮಾಡುತ್ತಿದ್ದ ಕುಖ್ಯಾತ ಡ್ರಗ್ ಪೆಡ್ಲರ್ ಸೇರಿದಂತೆ ಮೂವರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮೂಡುಶೆಡ್ಡೆ ಗ್ರಾಮದ ಶಿವನಗರದ ಮೊಹಮ್ಮದ್ ಇಮ್ರಾನ್ (36), ಉಡುಪಿ ಜಿಲ್ಲೆಯ ಮಣಿಪಾಲದ ಬಡಗಬೆಟ್ಟು ನಿವಾಸಿ ಅಮ್ಜತ್ ಖಾನ್ (42), ಮಂಗಳೂರಿನ ಮಂಜನಾಡಿಯ ಅಬ್ದುಲ್ ಬಶೀರ್ ಅಬ್ಬಾಸ್(39) ಬಂಧಿತ ಆರೋಪಿಗಳಾಗಿದ್ದಾರೆ.
ಆರೋಪಿ ಮೊಹಮ್ಮದ್ ಇಮ್ರಾನ್ ಇತರ ಇಬ್ಬರೊಂದಿಗೆ ಸೇರಿಕೊಂಡು ಬೆಂಗಳೂರಿನಿಂದ ಮಾದಕ ವಸ್ತು ಎಂಡಿಎಂಎ ಖರೀದಿಸಿ, ಕಾರಿನಲ್ಲಿ ತಂದು ಬೊಂದೆಲ್ ಪಡುಶೆಡ್ಡೆ ಸುತ್ತಮುತ್ತ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಘಟಕದ ಎಸಿಪಿ ಪಿ ಎ ಹೆಗಡೆ ನೇತೃತ್ವದ ಪೊಲೀಸ್ ತಂಡ ದಾಳಿ ನಡೆಸಿ ಮೂವರನ್ನೂ ಬಂಧಿಸಿದೆ.
ಬಂಧಿತ ಆರೋಪಿಗಳಿಂದ ಪೊಲೀಸರು ಒಟ್ಟೂ 170 ಗ್ರಾಂ ತೂಕದ 9,00,000 ರೂ. ಮೌಲ್ಯದ ಎಂಡಿಎಂಎ, 5 ಎಂಡಿಎಂಎ ಫಿಲ್ಸ್, ಒಂದು ಕಾರು, 6 ಮೊಬೈಲ್ ಫೋನ್, ಡಿಜಿಟಲ್ ತೂಕದ ಮಾಪನವನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 14,76,500 ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಆರೋಪಿಗಳ ವಿರುದ್ಧ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಪತ್ತೆ ಕಾರ್ಯ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಇಮ್ರಾನ್ ವಿರುದ್ಧ ಈ ಹಿಂದೆ 2016ರಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವಾಮಂಜೂರು ಚರಣ್ ಎಂಬಾತನ ಕೊಲೆ ಪ್ರಕರಣ ಸೇರಿದಂತೆ ವಿವಿಧ ಠಾಣೆಗಳಲ್ಲಿ ಗಾಂಜಾ ಸಾಗಾಟ ಮತ್ತು ಮಾರಾಟ ಸೇರಿದಂತೆ ಇದುವರೆಗೆ ಒಟ್ಟು 9 ಪ್ರಕರಣಗಳು ದಾಖಲಾಗಿವೆ. ಇಮ್ರಾನ್ ಒಂದು ವಾರದ ಹಿಂದೆ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಗೊಂಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇನ್ನೋರ್ವ ಆರೋಪಿ ಅಬ್ದುಲ್ ಬಶೀರ್ ಅಬ್ಬಾಸ್ ವಿರುದ್ಧ ಈ ಹಿಂದೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣವೊಂದು ದಾಖಲಾಗಿತ್ತು. ಈ ಮಾದಕ ವಸ್ತು ಮಾರಾಟ ಜಾಲದ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಎಸಿಪಿ ಪಿ ಎ ಹೆಗಡೆ, ಪೊಲೀಸ್ ನಿರೀಕ್ಷಕರಾದ ಶ್ಯಾಮ್ ಸುಂದರ್ ಹೆಚ್ ಎಂ, ಪಿಎಸ್ಐಗಳಾದ ನರೇಂದ್ರ, ಸುದೀಪ್ ಎಂ ವಿ, ಶರಣಪ್ಪ ಭಂಡಾರಿ ಹಾಗೂ ಸಿಸಿಬಿ ಸಿಬ್ಬಂದಿ ಪಾಲ್ಗೊಂಡಿದ್ದಾರೆ.
ಇದನ್ನೂ ಓದಿ: Kolar crime: ಮೂವರು ಬೈಕ್ ಕಳ್ಳರು ಸೆರೆ; ₹30 ಲಕ್ಷ ಮೌಲ್ಯದ ಬೈಕ್‌ಗಳು, ಮೊಬೈಲ್ ವಶಕ್ಕೆ