ಮಂಗಳೂರು : ಬಾಲಕಿಯರನ್ನು ಗರ್ಭವತಿಯನ್ನಾಗಿಸಿದ ಎರಡು ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಮೊದಲ ಪ್ರಕರಣದಲ್ಲಿ ಬಾಲಕಿಯನ್ನು ಗರ್ಭಿಣಿಯಾಗಲು ಕಾರಣನಾದ ಯುವಕನನ್ನು ಕಡಬ ಪೊಲೀಸರು ಬಂಧಿಸಿ ಪೋಕ್ಸೊ ಪ್ರಕರಣ ದಾಖಲಿಸಿದ್ದಾರೆ. ಕೋಡಿಂಬಾಳದ ನಿಶಾಂತ್ (20) ಬಂಧಿತ ಆರೋಪಿ. ಈತ ತನ್ನ ಸೋದರ ಸಂಬಂಧಿ 14 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದು, ಗರ್ಭಿಣಿಯಾಗಿದ್ದಾಳೆ.
ತಾಯಿ ಜತೆ ಬಾಲಕಿ ಕಡಬ ಸಮುದಾಯ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದಾಗ ಗರ್ಭವತಿ ಆಗಿರುವುದು ಬೆಳಕಿಗೆ ಬಂದಿದೆ. ಎಂಟು ತಿಂಗಳ ಗರ್ಭಿಣಿಯಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಯುವಕನನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಸುಳ್ಯದಲ್ಲಿ ಬಾಲಕಿ ಮೇಲೆ ಅತ್ಯಾಚಾರ : ಬಾಲಕಿಯನ್ನು ಗರ್ಭವತಿಯನ್ನಾಗಿಸಿದ ಆರೋಪಿ ಯುವಕನನ್ನು ಸುಳ್ಯ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಸುಳ್ಯ ತಾಲ್ಲೂಕಿನ ಕಲ್ಮಡ್ಕ ಗ್ರಾಮದ ನಿವಾಸಿ ಕಾರ್ತಿಕ್ ಬಂಧಿತ ಆರೋಪಿ. ಈತನ ವಿರುದ್ಧ ಪೋಕ್ಸೊ ಕಾಯ್ದೆ ಅಡಿ ಮೊಕದ್ದಮೆ ದಾಖಲಿಸಲಾಗಿದೆ.
ಆರೋಪಿಯು ಬಾಲಕಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ. ಬಾಲಕಿಗೆ ಶುಕ್ರವಾರ (ಜುಲೈ 7) ಹೊಟ್ಟೆನೋವು ಕಾಣಿಸಿಕೊಂಡಿದ್ದು, ಸುಳ್ಯದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಸ್ಕ್ಯಾನಿಂಗ್ ಮಾಡಿಸುವಂತೆ ಸಲಹೆ ನೀಡಿದ್ದರು. ಸ್ಕ್ಯಾನಿಂಗ್ ಮಾಡಿದಾಗ 4 ತಿಂಗಳ ಗರ್ಭಿಣಿ ಆಗಿರುವುದು ತಿಳಿದುಬಂದಿದೆ. ಈ ಬಗ್ಗೆ ವಿಚಾರಿಸಿದಾಗ ಕಲ್ಮಡ್ಕದ ಕಾರ್ತಿಕ್ ದೈಹಿಕ ಸಂಪರ್ಕ ಎಸಗಿದ್ದಾನೆ ಎಂದು ಆಕೆ ತಿಳಿಸಿದ್ದಾಳೆ. ತಾಯಿ ಸುಳ್ಯ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
ಮಹಿಳೆ ಜತೆ ಅಸಭ್ಯ ವರ್ತನೆ: ಅಪರಾಧಿಗೆ 4 ತಿಂಗಳ ಶಿಕ್ಷೆ, ದಂಡ : ಮಹಿಳೆಯ ಜತೆ ಅಶ್ಲೀಲವಾಗಿ ವರ್ತಿಸಿದ ಪ್ರಕರಣದಲ್ಲಿ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ವ್ಯಕ್ತಿಗೆ ಮಂಗಳೂರಿನ 3ನೇ ಜೆಎಂಎಫ್‌ಸಿ ನ್ಯಾಯಾಲಯವು ನಾಲ್ಕು ತಿಂಗಳ ಸಾದಾ ಕಾರಾಗೃಹ ಶಿಕ್ಷೆ ಮತ್ತು 2500 ರೂ. ದಂಡ ವಿಧಿಸಿ ತೀರ್ಪು ನೀಡಿದೆ. ತಲಪಾಡಿಯ ಮೊಹಮ್ಮದ್ ಮುಸ್ತಾಫ ಶಿಕ್ಷೆಗೊಳಗಾದ ಅಪರಾಧಿ.
ಮೊಹಮ್ಮದ್ ಮುಸ್ತಾಫ 2017ರ ಜೂ.29ರಂದು ಸಂಜೆ ನಗರದ ಲೇಡಿಹಿಲ್ ಬಳಿ ಬಸ್ ನಿಲ್ದಾಣ ಸಮೀಪದ ಮಹಿಳೆಯ ಮಾನಕ್ಕೆ ಕುಂದುಂಟು ಮಾಡುವ ಉದ್ದೇಶದಿಂದ ಅಶ್ಲೀಲವಾಗಿ ವರ್ತಿಸಿದ್ದ ಬಗ್ಗೆ ಪ್ರಕರಣ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರಿನ ಮೂರನೇ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ತಾರಾ ಕೆ.ಸಿ. ಅವರು ವಿಚಾರಣೆಯಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ 4 ತಿಂಗಳ ಸಾದಾ ಕಾರಾಗೃಹ ಶಿಕ್ಷೆ ಮತ್ತು 2,500 ರೂ.ಗಳ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕಿ ನೇತ್ರಾವತಿ ವಾದ ಮಂಡಿಸಿದ್ದಾರೆ. ಎಎಸ್‌ಐ ಐತಪ್ಪ ಪ್ರಕರಣ ದಾಖಲಿಸಿದ್ದರು. ಪಿಎಸ್ ಐ ಕೃಷ್ಣಾ ಬಿ. ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಗಾಂಜಾ ಮಾರಾಟ ಪ್ರಕರಣ- ಶಿಕ್ಷೆ ಪ್ರಕಟ : ಗಾಂಜಾ ಮಾರಾಟ ಪ್ರಕರಣದ ಅಪರಾಧಿಗೆ ಆರು ತಿಂಗಳ ಕಠಿಣ ಸಜೆ ಮತ್ತು ಹತ್ತು ಸಾವಿರ ರೂ. ದಂಡ ವಿಧಿಸಿ ಮಂಗಳೂರಿನ 3ನೇ ಜೆಎಂಎಫ್ ಸಿ ನ್ಯಾಯಾಲಯ ತೀರ್ಪು ನೀಡಿದೆ. ಕುದ್ರೋಳಿಯ ಸಿಪಿಸಿ ಕಾಂಪೌಂಡ್‌ನ ನಿವಾಸಿ ಇಬ್ರಾಹಿಂ ಕೆ. (39) ಶಿಕ್ಷೆಗೊಳಗಾದ ಅಪರಾಧಿ.
2018ರ ಫೆ.14ರಂದು ಇಬ್ರಾಹಿಂ ಸ್ಕೂಟರ್‌ನಲ್ಲಿ ಗಾಂಜಾ ಸಾಗಾಟ ಮಾಡಿ ನಗರದ ಕುಂಟಿಕಾನ ಜಂಕ್ಷನ್ ಫ್ಲೈ ಓವರ್ ಕೆಳಗೆ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಪೊಲೀಸರು ಬಂಧಿಸಿದ್ದರು. ಆತನ ಪ್ಯಾಂಟಿನ ಕಿಸೆಯಲ್ಲಿ 50 ಗ್ರಾಂ. ಗಾಂಜಾ ಪತ್ತೆಯಾಗಿತ್ತು. ಉಪ್ಪಳದಿಂದ ಗಾಂಜಾ ಖರೀದಿಸಿ ಮಾರಾಟ ಮಾಡಲು ತಂದಿರುವುದು ತನಿಖೆಯಿಂದ ದೃಢಪಟ್ಟಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರಿನ ಮೂರನೇ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ತಾರಾ ಕೆ.ಸಿ. ಅವರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 6 ತಿಂಗಳ ಕಠಿಣ ಸಜೆ ಮತ್ತು 10 ಸಾವಿರ ರೂ. ದಂಡ ವಿಧಿಸಿದ್ದಾರೆ. ಒಂದು ವೇಳೆ ದಂಡ ಪಾವತಿಸಲು ವಿಫಲವಾದರೆ ಒಂದು ತಿಂಗಳು ಹೆಚ್ಚುವರಿ ಸಾದಾ ಸಜೆ ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ. ಸಹಾಯಕ ಸರಕಾರಿ ಅಭಿಯೋಜಕಿ ನೇತ್ರಾವತಿ ಅವರು ಸರಕಾರದ ಪರವಾಗಿ ವಾದಿಸಿದ್ದರು.
ಹತ್ಯೆಯಾದ ಗಜ್ಜಾನ್ ವಿಳಾಸ ಪತ್ತೆಗೆ ಪೊಲೀಸರ ಮನವಿ : ನಗರದ ಮುಳಿಹಿತ್ಲುವಿನಲ್ಲಿ ಶನಿವಾರ ಅಂಗಡಿ ಮಾಲೀಕನಿಂದಲೇ ಹತ್ಯೆಯಾದ ಗಜ್ಜಾನ್ ಆಲಿಯಾಸ್ ಜಗ್ಗು ವಿಳಾಸ ಪತ್ತೆಗೆ ಪೊಲೀಸರು ಸಾರ್ವಜನಿಕರ ಸಹಕಾರ ಕೋರಿದ್ದಾರೆ.
ಕೊಲೆಯಾದ ಗಜ್ಜಾನ್ ಉತ್ತರ ಭಾರತದವನೆಂದು ಹೇಳಲಾಗುತ್ತಿದೆಯಾದರೂ ಆತನ ಬಗ್ಗೆ ನಿಖರ ವಿಳಾಸ ಯಾರಲ್ಲೂ ಇಲ್ಲ. ಆತನನ್ನು ಗಜ್ವಾನ್ ಎಂದು ಸ್ಥಳೀಯರು ಕರೆಯುತ್ತಿದ್ದು, ನಿಜ ಹೆಸರೇನೆಂದು ಯಾರಿಗೂ ಗೊತ್ತಿಲ್ಲ. ಈತನ ಸಂಬಂಧಿಕರು ಅಥವಾ ಪರಿಚಯಸ್ಥರು ಯಾರಾದರೂ ಇದ್ದಲ್ಲಿ ಪಾಂಡೇಶ್ವರ ಪೊಲೀಸ್ ಠಾಣೆ ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.
ಕೊಲೆ ಆರೋಪಿಗೆ ನ್ಯಾಯಾಂಗ ಬಂಧನ : ಕೊಲೆ ಆರೋಪಿ ಅಂಗಡಿ ಮಾಲೀಕ ತೌಸಿಫ್ ಹುಸೇನ್ ಹಾಸನ ಮೂಲದವನಾಗಿದ್ದು, ಆತನಿಗೆ ನ್ಯಾಯಾಲಯ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಇದನ್ನೂ ಓದಿ : Rape Case: ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ.. ವಿಡಿಯೋ ತೆಗೆದು ನಿರಂತರ ದೌರ್ಜನ್ಯ ಎಸಗುತ್ತಿದ್ದ ಪಾತಕಿಗಳು ಅಂದರ್!