ಮಂಗಳೂರು: ಕಳೆದ 13 ವರ್ಷಗಳಿಂದ ತರೆಮರೆಸಿಕೊಂಡು ಮುಂಬೈನಲ್ಲಿ ಹೋಟೆಲ್ ಮ್ಯಾನೇಜರ್ ಆಗಿದ್ದ ಆರೋಪಿಯನ್ನು ಉರ್ವ ಪೊಲೀಸರು ಬಂಧಿಸಿದ್ದಾರೆ. ಜಪ್ಪಿನಮೊಗರು ನಿವಾಸಿ ಪ್ರೀತಮ್ ಆಚಾರ್ಯ (38) ಬಂಧಿತ ಆರೋಪಿ.
ಪ್ರೀತಮ್ ಆಚಾರ್ಯ ಪ್ರಕರಣವೊಂದರಲ್ಲಿ ಭಾಗಿಯಾಗಿ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆ ಈತನ ಮೇಲೆ ಎಲ್ಪಿಸಿ ವಾರಂಟ್ ಜಾರಿಯಾಗಿತ್ತು. ಈತ ಮುಂಬೈನ ಹೋಟೆಲ್ವೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಬಗ್ಗೆ ಪೊಲೀಸರು ಖಚಿತ ಮಾಹಿತಿ ಪಡೆದಿದ್ದರು. ಉರ್ವ ಠಾಣೆಯ ಪೊಲೀಸರು ವಿಶೇಷ ಕರ್ತವ್ಯದಲ್ಲಿ ಮುಂಬೈಗೆ ತೆರಳಿ ಸೆ.3ರಂದು ಮಧ್ಯಾಹ್ನ 11 ಗಂಟೆಗೆ ಈತನು ಕೆಲಸ ಮಾಡುತ್ತಿದ್ದ ಹೋಟೆಲ್ನಲ್ಲಿ ವಶಕ್ಕೆ ಪಡೆದಿದ್ದರು.
ಬಳಿಕ ಸೆ.4ರಂದು ಬೆಳಗ್ಗೆ 11 ಗಂಟೆಗೆ ಉರ್ವ ಪೊಲೀಸ್ ಠಾಣೆಗೆ ಕರೆತರಲಾಗಿದೆ. ಸದ್ಯ ಈತನನ್ನು ಕೋರ್ಟ್ಗೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
207 ಡಿಎಲ್ ರದ್ದಿಗೆ ಶಿಫಾರಸು: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಮೋಟಾರು ವಾಹನ ಕಾಯಿದೆ, ಸಂಚಾರ ನಿಯಮ ಉಲ್ಲಂಘಿಸಿದ ಪ್ರಕರಣಗಳಲ್ಲಿ ಒಟ್ಟು 207 ಮಂದಿ ಚಾಲಕರು, ಸವಾರರ ಡ್ರೈವಿಂಗ್ ಲೈಸೆನ್ಸ್ ಅಮಾನತು ಪಡಿಸಲು ಪ್ರಾದೇಶಿಕ ಸಾರಿಗೆ ಕಚೇರಿಗೆ ಶಿಫಾರಸು ಮಾಡಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್. ಜೈನ್ ತಿಳಿಸಿದ್ದಾರೆ.
ಅಮಾನತಿಗೆ ಪ್ರಸ್ತಾವನೆ ಸಲ್ಲಿಸಿರುವ ಪ್ರಕರಣಗಳಲ್ಲಿ ಅತಿ ವೇಗ, ದುಡುಕುತನ ಮತ್ತು ನಿರ್ಲಕ್ಷ್ಯದ ಚಾಲನೆ ಮಾಡಿದ 59 ಪ್ರಕರಣಗಳು, ಮದ್ಯ ಸೇವಿಸಿ ವಾಹನ ಚಲಾಯಿಸಿದ 8 ಪ್ರಕರಣಗಳು, ಸರಕು ಸಾಗಾಟ ವಾಹನಗಳಲ್ಲಿ ಪ್ರಯಾಣಿಕರನ್ನು ಸಾಗಿಸಿರುವ 34 ಪ್ರಕರಣಗಳು, ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ ಮಾಡಿದ 4 ಪ್ರಕರಣಗಳು, ಟ್ರಿಪಲ್ ರೈಡಿಂಗ್ ನಡೆಸಿದ 4 ಪ್ರಕರಣಗಳು, ಹೆಲ್ಮೆಟ್ ಧರಿಸದೆ ಸವಾರಿ ಮಾಡಿದ 79 ಪ್ರಕರಣಗಳು, ಸೀಟ್ ಬೆಲ್ಟ್ ಹಾಕದಿರುವ 6 ಪ್ರಕರಣಗಳು ಮತ್ತು ಏಕಮುಖ ಸಂಚಾರ, ನೋ ಎಂಟ್ರಿ ನಿಯಮ ಉಲ್ಲಂಘಿಸಿದ 13 ಪ್ರಕರಣಗಳು ಸೇರಿವೆ ಎಂದು ತಿಳಿಸಿದ್ದಾರೆ.
"ಕಳೆದ 15 ದಿನಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ನಿಷೇಧಿತ ಸ್ಥಳದಲ್ಲಿ ವಾಹನ ಪಾರ್ಕಿಂಗ್ ವಿರುದ್ಧ 407, ಕರ್ಕಶ ಹಾರನ್ ಬಳಕೆ ವಿರುದ್ಧ 45, ಟಿಂಟ್ ಗ್ಲಾಸ್ ಹಾಕಿರುವುದರ ವಿರುದ್ಧ 50 ಮತ್ತು ಬಸ್‌ಗಳ ಪುಟ್ ಬೋರ್ಡ್‌ನಲ್ಲಿ ಸಂಚಾರ ಮಾಡಿದವರ ವಿರುದ್ಧ 174 ಪ್ರಕರಣಗಳನ್ನು ದಾಖಲಿಸಲಾಗಿದೆ"- ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್. ಜೈನ್.
ಇದನ್ನೂ ಓದಿ: ತಲೆ ಮರೆಸಿಕೊಂಡಿದ್ದ ಅಂತಾರಾಜ್ಯ ಮನೆಗಳ್ಳರ ಬಂಧನ : 1.80 ಕೋಟಿ ರೂ. ಮೌಲ್ಯದ 3.3 ಕೆಜಿ ಚಿನ್ನ ವಶಕ್ಕೆ
ವ್ಯಕ್ತಿ ಕೊಲೆಗೈದು ತಲೆಮರೆಸಿಕೊಂಡ ಆರೋಪಿ ಸೆರೆ: ಇತ್ತೀಚೆಗೆ ವ್ಯಕ್ತಿಯೊಬ್ಬರನ್ನು ಕೊಲೆಗೈದು ತಪ್ಪಿಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ನಗರ ಪಣಂಬೂರು ಠಾಣೆಯ ಪೊಲೀಸ್ ನಿರೀಕ್ಷಕರ ನೇತೃತ್ವದ ತಂಡ ಯಶಸ್ವಿಯಾಗಿದೆ. ಕೇರಳದ ಕಣ್ಣೂರಿನ ನ್ಯೂ ನಡುವಿಲ್ನ ಮನು ಸೆಬಾಸ್ಟಿಯನ್ (33) ಬಂಧಿತ ಆರೋಪಿ.
ಇದನ್ನೂ ಓದಿ: ಮಂಗಳೂರು: ಮಾರಕಾಸ್ತ್ರಗಳಿಂದ ವ್ಯಕ್ತಿ ಕೊಲೆಗೈದು ತಲೆಮರೆಸಿಕೊಂಡ ಆರೋಪಿ ಸೆರೆ