ಸುಳ್ಯ(ದಕ್ಷಿಣ ಕನ್ನಡ): ತಾಲೂಕಿನ ಆಲೆಟ್ಟಿ ಗ್ರಾಮದಲ್ಲಿ ಸೇತುವೆ ದಾಟುತ್ತಿದ್ದ ವೇಳೆ ಕಾಲುಜಾರಿ ಬಿದ್ದು ನೀರುಪಾಲಾಗಿದ್ದ ವ್ಯಕ್ತಿಯ ಮೃತದೇಹ ಇಂದು ಪತ್ತೆಯಾಗಿದೆ. ಸುಳ್ಯಕ್ಕೆ ತೋಟದ ಕೆಲಸಕ್ಕೆಂದು ಬಂದಿದ್ದ ಕಾಸರಗೋಡು ಜಿಲ್ಲೆಯ ಚಿಟ್ಟಾರಿಕಾಲ್ ನಿವಾಸಿ ನಾರಾಯಣನ್ (45) ಮೃತರು. ಸುಳ್ಯದ ಆಲೆಟ್ಟಿ ಗ್ರಾಮದ ಹೊನ್ನೇದಿ ಎಂಬಲ್ಲಿ ಗುರುವಾರ ಸಂಜೆ ಸೇತುವೆ ದಾಟುತ್ತಿದ್ದ ವೇಳೆ ನಾರಾಯಣನ್ ಆಕಸ್ಮಿಕವಾಗಿ ಕಾಲುಜಾರಿ ನದಿಗೆ ಬಿದ್ದು ನಾಪತ್ತೆಯಾಗಿದ್ದರು.
ಇವರ ಪತ್ತೆಗಾಗಿ ಅಗ್ನಿಶಾಮಕ ದಳ, ಪೊಲೀಸ್ ಮತ್ತು ಎಸ್‌ಡಿಆರ್‌ಎಫ್ ತಂಡ, ಮುಳುಗು ತಜ್ಞರು ಕಳೆದ ನಾಲ್ಕು ದಿನಗಳಿಂದ ಶೋಧ ನಡೆಸಿದರೂ ಪತ್ತೆಯಾಗಿರಲಿಲ್ಲ. ಘಟನೆ ಸಂಭವಿಸಿದ ಸ್ಥಳದಿಂದ ಸುಮಾರು 4 ಕಿ.ಮೀ. ದೂರದಲ್ಲಿ ಅವರ ಮೃತದೇಹ ಇಂದು ಪತ್ತೆಯಾಗಿದೆ. ಸುಳ್ಯ ಠಾಣಾಧಿಕಾರಿ ಈರಯ್ಯ ದೂಂತೂರು ಹಾಗೂ ಇತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಾರು ಹರಿದು ಮೂರು ಜಾನುವಾರುಗಳು ಸಾವು, ಒಬ್ಬರಿಗೆ ಗಾಯ: ಮತ್ತೊಂದೆಡೆ, ರಸ್ತೆಬದಿ ಮಲಗಿದ್ದ ಜಾನುವಾರುಗಳ ಮೇಲೆ ಕಾರು ಹರಿದ ಪರಿಣಾಮ ಮೂರು ಜಾನುವಾರುಗಳು ಮೃತಪಟ್ಟು, ಓರ್ವ ವೈದ್ಯ ವಿದ್ಯಾರ್ಥಿ ಗಾಯಗೊಂಡ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಪಂಡಿತ್ ಹೌಸ್ನಲ್ಲಿ ನಿನ್ನೆ ತಡರಾತ್ರಿ ನಡೆದಿದೆ. ಮೈಸೂರು ಮೂಲದ ಡಾ. ವಿವೇಕ್ ಶಶಿಕುಮಾರ್ ಗಾಯಗೊಂಡವರು. ದೇರಳಕಟ್ಟೆಯಿಂದ ತೊಕ್ಕೊಟ್ಟು ಕಡೆಗೆ ತೆರಳುತ್ತಿದ್ದ ಕಾರು ನಸುಕಿನ 3.30 ರ ಸುಮಾರಿಗೆ ಜಾನುವಾರುಗಳಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ ಪರಿಣಾಮ ರಸ್ತೆ ಬದಿಯಲ್ಲಿ ಮಲಗಿದ್ದ ಮೂರು ಜಾನುವಾರುಗಳು ಸಾವನ್ನಪ್ಪಿವೆ, ಕಾರಲ್ಲಿದ್ದ ವೈದ್ಯ ವಿದ್ಯಾರ್ಥಿ ಕೈ ಮೂಳೆ ಮುರಿತಕ್ಕೊಳಗಾಗಿದೆ. ಈ ಸಂಬಂಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೋರಿ ದಾಟುವಾಗ ನೀರಿಗೆ ಬಿದ್ದು ಓರ್ವ ಸಾವು: ಸೋಮೇಶ್ವರ ಪುರಸಭೆ ವ್ಯಾಪ್ತಿಯ ಪಿಲಾರಿನಲ್ಲಿ ಮನೆ ಸಂಪರ್ಕಿಸುವ ಮೋರಿ ದಾಟುವ ವೇಳೆ ಜಾರಿ ಬಿದ್ದು ಓರ್ವ ಸಾವನ್ನಪ್ಪಿದ್ದರು. ಕಳೆದ ಮಂಗಳವಾರ ಪಿಲಾರು ಪಂಜಂದಾಯ ದೈವಸ್ಥಾನದ ಬಳಿಯ ನಿವಾಸಿ ಸುರೇಶ್ ಗಟ್ಟಿ (52) ಎಂಬವರು ನೀರಿಗೆ ಬಿದ್ದು ಮೃತಪಟ್ಟಿದ್ದರು. ಸುರೇಶ್ ಗಟ್ಟಿ ಅವರು ವೃತ್ತಿಯಲ್ಲಿ ಪೈಂಟರ್ ಆಗಿದ್ದು, ಕೆಲಸ ಮುಗಿಸಿ ಸಂಜೆ ಮನೆಗೆ ಹೋಗಲು ಮೋರಿ ದಾಟುತ್ತಿದ್ದ ವೇಳೆ ಆಯತಪ್ಪಿ ಬಿದ್ದಿದ್ದರು. ಮೋರಿಯಲ್ಲಿ ಬಿದ್ದಿದ್ದ ಸುರೇಶ್ ಅವರನ್ನು ಪಕ್ಕದ ಮನೆಯ ಸೋಮೇಶ್ವರ ಗ್ರಾ.ಪಂ ಮಾಜಿ ಸದಸ್ಯ ಪ್ರೇಮಾನಂದ ಮತ್ತು ಅವರ ಸಂಬಂಧಿ ಧನರಾಜ್ ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸುವಾಗಲೇ ಸುರೇಶ್ ಮೃತಪಟ್ಟಿದ್ದರು.
ಸುರೇಶ್ ಗಟ್ಟಿ ಅವರ ಕುಟುಂಬಸ್ಥರಿಗೆ, ಪ್ರಾಕೃತಿಕ ವಿಕೋಪದಡಿ ರೂ.5 ಲಕ್ಷ ಪರಿಹಾರವನ್ನು ಕಂದಾಯ ಇಲಾಖೆ ನೀಡಿತ್ತು. ಘಟನಾ ಸ್ಥಳಕ್ಕೆ ತಹಶೀಲ್ದಾರ್ ಪ್ರಭಾಕರ್ ಖರ್ಜುರೆ, ಕಂದಾಯ ನಿರೀಕ್ಷಕ ಮಂಜುನಾಥ್ ಕೆ. ಹೆಚ್, ಪುರಸಭೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಮೃತದೇಹದ ಮಹಜರು ವರದಿಯನ್ನು ಸಂಗ್ರಹಿಸಿ, ಮೃತರ ಪ್ರಮಾಣ ಪತ್ರವನ್ನು ಸರ್ಕಾರಕ್ಕೆ ತಲುಪಿಸಿ ಪರಿಹಾರ ಧನವನ್ನು ಖಜಾನೆ 2 ಮುಖೇನ ಅವರ ಪತ್ನಿ ಶಾಂಭ ಅವರಿಗೆ ನೀಡಿತ್ತು.
ಇದನ್ನೂ ಓದಿ: Amarnath Yatra: ಅಮರನಾಥ ಯಾತ್ರೆಗೆ ಹೊರಟಿದ್ದ ಬಂಟ್ವಾಳದ ಭಕ್ತರು ಸೇರಿದಂತೆ ಕರಾವಳಿಯ 20 ಮಂದಿ ಸೇಫ್