ಮಂಗಳೂರು (ದಕ್ಷಿಣ ಕನ್ನಡ): ನಗರದ ಉರ್ವಾ ಮೈದಾನದಲ್ಲಿ ನಡೆದ ಹುಲಿವೇಷ ಸ್ಪರ್ಧೆ ಪಿಲಿನಲಿಕೆಯಲ್ಲಿ ಭಾರತ ತಂಡದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಮತ್ತು ಬಾಲಿವುಡ್ ನಟ ಸುನೀಲ್ ಶೆಟ್ಟಿ ಭಾಗಿಯಾದರು. ಕಾಂಗ್ರೆಸ್ ಮುಖಂಡ ಮಿಥುನ್ ರೈ ನೇತೃತ್ವದಲ್ಲಿ ಪಿಲಿನಲಿಕೆ ಎಂಬ ಹುಲಿವೇಷ ಸ್ಪರ್ಧೆ ನಡೆಯಿತು.
ನಿನ್ನೆ ರಾತ್ರಿ ಹರ್ಭಜನ್ ಸಿಂಗ್ ಹಾಗೂ ಸುನೀಲ್ ಶೆಟ್ಟಿ ಪಿಲಿನಲಿಕೆಯ ರಂಗನ್ನು ಮತ್ತಷ್ಟು ಹೆಚ್ಚಿಸಿದರು. ಹುಲಿವೇಷ ಕುಣಿತ ಕಂಡು ಖುಷಿಪಟ್ಟ ಹರ್ಭಜನ್ ಸಿಂಗ್ ಪಿಲಿನಲಿಕೆಯ ದೃಶ್ಯವನ್ನು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದರು. ಈ ವೇಳೆ ಹುಲಿ ಕುಣಿತದ ಬಗ್ಗೆ ಸ್ಟಾರ್ ಕ್ರಿಕೆಟಿಗನಿಗೆ ಸುನೀಲ್ ಶೆಟ್ಟಿ ಮಾಹಿತಿ ನೀಡಿದರು. ಹರ್ಭಜನ್ ಸಿಂಗ್ ಆಗಮಿಸುತ್ತಿದ್ದಂತೆ ವೇದಿಕೆಯ ಮುಂಭಾಗದಲ್ಲಿ ಕುಳಿತಿದ್ದ ಜನರು ಕರತಾಡನದ ಜೊತೆಗೆ ಮೊಬೈಲ್ ಲೈಟ್ ಆನ್ ಮಾಡಿ ಕ್ರಿಕೆಟಿಗನ ಮೇಲಿರುವ ಪ್ರೀತಿಯನ್ನು ವ್ಯಕ್ತಪಡಿಸಿದರು. ಒಟ್ಟು ಹತ್ತು ತಂಡಗಳ ಪಿಲಿನಲಿಕೆ ಸ್ಪರ್ಧೆಯಲ್ಲಿ ಎರಡು ತಂಡಗಳ ಹುಲಿಕುಣಿತವನ್ನು ಅವರು ವೀಕ್ಷಿಸಿದರು.
ಇದನ್ನೂ ಓದಿ: ದಸರಾ ದರ್ಶಿನಿ: ನವರಾತ್ರಿ ಹಿನ್ನೆಲೆ ದೇವಾಲಯ ದರ್ಶನಕ್ಕೆ ಕೆಎಸ್ಆರ್ಟಿಸಿಯಿಂದ ವಿಶೇಷ ಪ್ಯಾಕೇಜ್
ಬಳಿಕ ಸಂತಸ ವ್ಯಕ್ತಪಡಿಸಿದ ಹರ್ಭಜನ್ ಸಿಂಗ್, ನನಗೆ ಬಹಳಷ್ಟು ಪ್ರೀತಿ ಕೊಟ್ಟಿದ್ದೀರಿ. ಈ ಪ್ರೀತಿಗೆ ನಾನೇನು ಹೇಳಬೇಕೆಂದು ಗೊತ್ತಿಲ್ಲ ಎಂದು ನೆರೆದಿರುವ ಪ್ರೇಕ್ಷಕರಿಗೆ ಸಾಷ್ಟಾಂಗ ಪ್ರಣಾಮ ಮಾಡಿದರು. ವಿಭಿನ್ನ ಸಂಸ್ಕೃತಿಯನ್ನು ನೋಡಿ ಖುಷಿಯಾಗಿದೆ. ಹುಲಿವೇಷಧಾರಿಗಳ ಎನರ್ಜಿ ನೋಡಿ ಒಂದು ಸಲ ನಾನೇ ದಂಗಾಗಿ ಹೋದೆ. ಇಷ್ಟೊಂದು ಎನರ್ಜಿ ಇದ್ದಲ್ಲಿ ಭಾರತ ಇಪ್ಪತ್ತು ವರ್ಷಗಳ ಕಾಲ ಕ್ರಿಕೆಟ್ ಪಂದ್ಯದಲ್ಲಿ ಗೆಲುವು ಸಾಧಿಸುವುದು ಖಂಡಿತ. ವರ್ಲ್ಡ್ ಕಪ್ ಕ್ರಿಕೆಟ್ನಲ್ಲಿ ಈ ಬಾರಿ ಭಾರತಕ್ಕೆ ಗೆಲುವು ಸಿಗಲಿ ಎಂದು ಎಲ್ಲರು ಪ್ರಾರ್ಥಿಸಿ ಎಂದರು.
ಬಳಿಕ ಬಾಲಿವುಡ್ ನಟ ಸುನಿಲ್ ಶೆಟ್ಟಿ ಮಾತನಾಡಿ, ಹರ್ಭಜನ್ ಸಿಂಗ್ ಇದೇ ಮೊದಲ ಬಾರಿಗೆ ಮಂಗಳೂರಿಗೆ ಬಂದಿದ್ದಾರೆ. ಅವರು ಇಲ್ಲಿಯ ಆಹಾರವನ್ನು ಮೆಚ್ಚಿದ್ದಾರೆ. ಪಿಲಿನಲಿಕೆಯಲ್ಲಿ ಕುಣಿದ ಹುಲಿವೇಷಧಾರಿಗಳ ಆ್ಯಕ್ಷನ್ ನೋಡಿ ನನ್ನ ಮೂವತ್ತು ವರ್ಷದ ಆ್ಯಕ್ಷನ್ ಕೊಚ್ಚಿಕೊಂಡು ಹೋಗಿದೆ ಎಂದು ತುಳುನಾಡ ಹೆಮ್ಮೆ ಹುಲಿವೇಷ ಕುಣಿತದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ತುಳುನಾಡ ಹೆಮ್ಮೆ ಹುಲಿವೇಷ: ನವರಾತ್ರಿ ಬಂತೆಂದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹುಲಿ ವೇಷ ಕುಣಿತ ಹೆಚ್ಚು ಗಮನ ಸೆಳೆಯುತ್ತದೆ. 9 ದಿನಗಳ ಕಾಲ ದಕ್ಷಿಣ ಕನ್ನಡ ಜಿಲ್ಲೆಯ ಮೂಲೆ ಮೂಲೆಯಲ್ಲೂ ಹುಲಿ ವೇಷದ ನರ್ತನಗಳು ಹಬ್ಬಕ್ಕೆ ಮೆರುಗು ನೀಡುತ್ತದೆ. ಜಿಲ್ಲೆಯಲ್ಲಿ ನೂರಾರು ಹುಲಿ ವೇಷದ ತಂಡಗಳಿವೆ. ತಂಡದಲ್ಲಿ 15ಕ್ಕೂ ಅಧಿಕ ಹುಲಿವೇಷಧಾರಿಗಳು ಸೇರಿದಂತೆ 60 ಮಂದಿ ಸದಸ್ಯರಿರುತ್ತಾರೆ. ಈ ಹುಲಿ ವೇಷ ತಂಡಗಳನ್ನು ಪ್ರಭಾವಿ ವ್ಯಕ್ತಿಯೊಬ್ಬರು ನಡೆಸುತ್ತಾರೆ. ತಂಡದಲ್ಲಿರುವ ಸದಸ್ಯರು ನವರಾತ್ರಿಗೆ ಹುಲಿ ವೇಷ ಹಾಕಿ 9 ದಿನಗಳ ಕಾಲ ಜಿಲ್ಲೆಯ ಜನರಿಗೆ ಮನರಂಜನೆ ನೀಡುತ್ತಾರೆ.
ಇದನ್ನೂ ಓದಿ: ಮಂಗಳೂರು ದಸರಾ: ಶ್ರೀಕ್ಷೇತ್ರ ಕುದ್ರೋಳಿಯಲ್ಲಿ ನವದುರ್ಗೆಯರ ಪ್ರತಿಷ್ಠಾಪನೆ- ವಿಡಿಯೋ