ದಕ್ಷಿಣ ಕನ್ನಡ: ಪಾವೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಉತ್ತಮ ತಂಡಗಳನ್ನು ರಚಿಸಿ ಕೊರೊನಾ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ, ಅವರ ಸಾವಿನಲ್ಲೂ ಗೌರವ ತೋರಿ, ಅಂತ್ಯ ಸಂಸ್ಕಾರವೂ ಗೌರವಯುತವಾಗಿ ನಡೆಯುವಂತಾಗಬೇಕು. ಅದಕ್ಕಾಗಿ ಪ್ರತ್ಯೇಕ ತರಬೇತಿ ನೀಡಬೇಕಾಗಿದೆ ಎಂದು ಶಾಸಕ ಯು.ಟಿ.ಖಾದರ್ ಹೇಳಿದರು.
ಪಾವೂರು, ಹರೇಕಳ, ಬೆಲ್ಮ, ಬೋಳಿಯಾರ್ ಹಾಗೂ ಇತರ ಗ್ರಾಮಸ್ಥರಿಗೆ ಪಾವೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಇಂದು ನಡೆದ ಕೊರೊನಾ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದ ಖಾದರ್, ಕೊರೊನಾ ಸೋಂಕಿನ ಲಕ್ಷಣಗಳು ಯಾರಲ್ಲೂ ಕಾಣಿಸುವುದಿಲ್ಲ. ಉಳ್ಳಾಲದಲ್ಲಿ ರ್ಯಾಂಡಮ್ ಪರೀಕ್ಷೆ ನಡೆಸಿದ್ದರಿಂದ ಹಲವರಲ್ಲಿ ಸೋಂಕು ಪತ್ತೆಯಾಗಿದೆ. ಆದರೆ ಈ ವಿಚಾರ ಹಾಗೂ ಚಿಕಿತ್ಸೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಲಾಗುತ್ತಿದೆ. ಇಂತಹ ಸುದ್ದಿ ಹರಡುವವರು ತಮ್ಮ ಮನೆಯವರಿಗೆ ಮೊದಲಾಗಿ ಚಿಕಿತ್ಸೆ ಕೊಡಿಸುತ್ತಿದ್ದಾರೆ ಎಂದು ಹೇಳಿದರು.
ಕೊರೊನಾ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತಂಡಗಳನ್ನು ರಚಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಕೊರೊನಾದಿಂದಾಗಿ ಸಾವನ್ನಪ್ಪಿದ ವ್ಯಕ್ತಿಗಳ ಅಂತ್ಯ ಸಂಸ್ಕಾರ ಮಾಡುವಾಗಲೂ ಸಹ ಗೌರವಯುತವಾಗಿ ಕಾರ್ಯ ನೆರವೇರಬೇಕು ಎಂದರು.
ಆಯುಷ್ಮಾನ್ ಭಾರತ್ ಯೋಜನೆಯ ಅಧಿಕಾರಿ ಡಾ. ಸಚ್ಚಿದಾನಂದ ಮಾತನಾಡಿ, ಪ್ರಾಥಮಿಕ, ಸಾಮಾನ್ಯ ಹಾಗೂ ದ್ವಿತೀಯ ಹಂತದ ಚಿಕಿತ್ಸೆ ಸರ್ಕಾರಿ ಆಸ್ಪತ್ರೆಗಳಲ್ಲೇ ಪಡೆಯಬೇಕಿದ್ದು, ಕ್ಲಿಷ್ಟಕರ ಚಿಕಿತ್ಸೆ ಜಿಲ್ಲಾಸ್ಪತ್ರೆಯಲ್ಲಿ ಆಗದಿದ್ದರೆ ಶಿಫಾರಸಿನ ಮೂಲಕ ಖಾಸಗಿ ಆಸ್ಪತ್ರೆಗಳಲ್ಲಿ ಪಡೆಯಬಹುದಾಗಿದೆ. ತುರ್ತು ಚಿಕಿತ್ಸೆಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಲಾಗಿದೆ. ಈ ಯೋಜನೆಯಡಿ ಕೋವಿಡ್-19 ಚಿಕಿತ್ಸೆಯನ್ನು ಸೇರಿಸಲಾಗಿದೆ ಎಂದು ತಿಳಿಸಿದರು.