ಮಂಗಳೂರು: ಕೋವಿಡ್ ಸೋಂಕು ತಗುಲಿರುವ ಕೊರೊನಾ ವಾರಿಯರ್ಸ್ ಪೊಲೀಸ್ ಸಿಬ್ಬಂದಿಯ ಶುಶ್ರೂಷೆಗಾಗಿ ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಗೊಂಡಿದೆ.
ನಗರದ ಸಂತ ಅಲೋಶಿಯಸ್ ಕಾಲೇಜಿನ ಹಾಸ್ಟೆಲ್ನಲ್ಲಿ 18 ಬೆಡ್ಗಳ ಈ ಕೋವಿಡ್ ಕೇರ್ ಸೆಂಟರ್ ಅನ್ನು ಪೊಲೀಸ್ ಸಿಬ್ಬಂದಿಗಾಗಿ ನಿಯೋಜಿಸಲಾಗಿದೆ. ಈಗಾಗಲೇ ಓರ್ವ ಸೋಂಕಿತ ಪೊಲೀಸ್ ಇಲ್ಲಿ ದಾಖಲಾಗಿದ್ದಾರೆ.
ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿ 1,700 ಕ್ಕೂ ಅಧಿಕ ಮಂದಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮೊದಲ ಅಲೆಯ ಕೋವಿಡ್ ಸೋಂಕು ಕಾಣಿಸಿಕೊಂಡ ಸಂದರ್ಭದಲ್ಲಿ 330 ಮಂದಿ ಪೊಲೀಸರಿಗೆ ಸೋಂಕು ತಗುಲಿದ್ದು, ಓರ್ವ ಪೊಲೀಸ್ ಮೃತ ಪಟ್ಟಿದ್ದರು. ಎರಡನೇ ಅಲೆಯಲ್ಲಿ ಈವರೆಗೆ 62 ಮಂದಿ ಪೊಲೀಸರಿಗೆ ಸೋಂಕು ತಗುಲಿದ್ದು, ನಿನ್ನೆ ಓರ್ವ ಪೊಲೀಸ್ ಕಾನ್ಸ್ಟೇಬಲ್ ಮೃತಪಟ್ಟಿದ್ದಾರೆ. ಇದೀಗ ಡಿಜಿಪಿ ಪ್ರವೀಣ್ ಸೂದ್ ಹಾಗೂ ಇತರ ಹಿರಿಯ ಅಧಿಕಾರಿಗಳ ಸೂಚನೆಯ ಮೇರೆಗೆ ಅವಶ್ಯಕತೆ ಇರುವೆಡೆಗಳಲ್ಲಿ ಪೊಲೀಸರಿಗಾಗಿ ಕೋವಿಡ್ ಕೇರ್ ಸೆಂಟರ್ ಅನ್ನು ಆರಂಭಿಸಲಾಗುತ್ತಿದೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಎನ್. ಮಾತನಾಡಿ, ಅಲೋಶಿಯಸ್ ಕಾಲೇಜಿನಲ್ಲಿರುವ ಕೋವಿಡ್ ಕೇರ್ ಸೆಂಟರ್ನಲ್ಲಿ 18 ಬೆಡ್ಗಳ ವ್ಯವಸ್ಥೆ ಇದ್ದು, ಇದು ಭರ್ತಿ ಆದಲ್ಲಿ ಸುರತ್ಕಲ್ನ ಎನ್ಐಟಿಕೆ ಕಾಲೇಜಿನಲ್ಲಿ ಇದೇ ರೀತಿ 300 ಬೆಡ್ಗಳ ಕೋವಿಡ್ ಕೇರ್ ಸೆಂಟರ್ ಆರಂಭಿಸುವ ಚಿಂತನೆ ಇದೆ ಎಂದರು.