ಮಂಗಳೂರು: ನಿವೃತ್ತ ತಹಸೀಲ್ದಾರರೋರ್ವರ ಮೇಲಿರುವ ಲಂಚ ಸ್ವೀಕಾರ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮಂಗಳೂರಿನ ಮೂರನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಲೋಕಾಯುಕ್ತ ವಿಶೇಷ ನ್ಯಾಯಾಲಯ 1 ವರ್ಷ ಸಾದಾ ಸಜೆ ಮತ್ತು 10,000/- ದಂಡ ವಿಧಿಸಿ ಆದೇಶ ನೀಡಿದೆ.
![Tahsildar](https://etvbharatimages.akamaized.net/etvbharat/prod-images/kn-mng-01-15-script-lanchaswikara-vishwanath-panjimogaru_15062019214619_1506f_1560615379_1046.jpg)
ಪ್ರಕರಣದ ಹಿನ್ನೆಲೆ:
2012ರ ಸಂದರ್ಭ ಬಂಟ್ವಾಳ ತಾಲೂಕಿನಲ್ಲಿ ತಹಸೀಲ್ದಾರಾಗಿದ್ದ ಟಿ.ಎನ್. ನಾರಾಯಣ ರಾವ್ ಅವರು ತಂದೆಯ ಹೆಸರಿನಿಂದ ಮಗನ ಹೆಸರಿಗೆ ಗನ್ ಲೈಸನ್ಸ್ ವರ್ಗಾಯಿಸಲು ಬಂಟ್ವಾಳದ ಸತೀಶ್ ಪ್ರಭು ಎಂಬವರಿಂದ 3,000 ರೂ. ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂದರ್ಭ 2,000 ರೂ. ಲಂಚವನ್ನು ಸ್ವೀಕರಿಸುತ್ತಿದ್ದಾಗ ಮಂಗಳೂರು ಲೋಕಾಯುಕ್ತ ನಿರೀಕ್ಷಕ ದಿಲೀಪ್ ಕುಮಾರ್ ಮತ್ತು ಸಿಬ್ಬಂದಿ ದಾಳಿ ಮಾಡಿ ಆರೋಪಿ ನಾರಾಯಣ ರಾವ್ ನನ್ನು ಬಂಧಿಸಿದ್ದರು. ಆಗ ಆರೋಪಿಯ ವಶದಲ್ಲಿದ್ದ ಲೋಕಾಯುಕ್ತ ನಿರೀಕ್ಷಕರು ವಶಪಡಿಸಿಕೊಂಡಿದ್ದರು.
ವಿಚಾರಣೆ ನಡೆಸಿದ ಮಂಗಳೂರು ಲೋಕಾಯುಕ್ತ ವಿಶೇಷ ನ್ಯಾಯಾಲಯವು ವಿಶೇಷ ಸರಕಾರಿ ಅಭಿಯೋಜಕ ಕೆ. ಎಸ್. ಎನ್. ರಾಜೇಶ್ ರವರ ವಾದವನ್ನು ಪುರಸ್ಕರಿಸಿ, ಆರೋಪಿಯ ಮೇಲಿನ ಆರೋಪ ಸಾಬೀತಾಗಿದೆ ಎಂದು ಘೋಷಣೆ ಮಾಡಿದೆ.
ಈ ಹಿನ್ನೆಲೆಯಲ್ಲಿ ಮೂರನೆಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಬಿ. ಮುರಳಿಧರ ಪೈ ಭ್ರಷ್ಟಾಚಾರ ನಿಗ್ರಹ ಕಾಯಿದೆಯ ಅನ್ವಯ ಆರೋಪಿಗೆ 1 ವರ್ಷ ಸಾದಾ ಸಜೆ ಮತ್ತು 10,000 ರೂ. ದಂಡ ವಿಧಿಸಿದೆ.
ಇನ್ನೂ ಆರೋಪಿಯು ದಂಡ ತೆರಲು ತಪ್ಪಿದಲ್ಲಿ ಮತ್ತೆ 3 ತಿಂಗಳ ಸಾದಾ ಸಜೆ ಅನುಭವಿಸಬೇಕೆಂದು ನ್ಯಾಯಾಲಯ ಆದೇಶಿಸಿದೆ. ಆಲ್ಲದೆ ಆರೋಪಿಯಿಂದ ವಶಪಡಿಸಿಕೊಂಡ 85,000 ರೂ. ನಗದಿಗೆ ಆರೋಪಿ ಸೂಕ್ತ ದಾಖಲೆ ನೀಡಲು ವಿಫಲನಾದ ಕಾರಣ ಸರಕಾರಕ್ಕೆ ಮುಟ್ಟುಗೋಲು ಹಾಕುವಂತೆ ನ್ಯಾಯಾಲಯ ಆದೇಶಿಸಿದೆ.
ಆರೋಪಿ ಈಗ ಕೆಲಸದಿಂದ ನಿವೃತ್ತಿಯಾಗಿದ್ದು, ಬೆಂಗಳೂರಿನ ಯಲಹಂಕದಲ್ಲಿ ವಾಸಿಸುತ್ತಿದ್ದಾರೆ.