ಮಂಗಳೂರು: ಕೊರೊನಾ ಎರಡನೇ ಅಲೆ ಆರಂಭವಾಗಿದ್ದು, ಜನರಲ್ಲಿ ಭಯ, ಗೊಂದಲದ ವಾತಾವರಣ ಸೃಷ್ಟಿಯಾಗಿದೆ. ಇದಕ್ಕೆ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಮಾಜಿ ಸಚಿವ ಯುಟಿ ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಸರ್ಕಾರ ದಿನಕ್ಕೊಂದು ಆದೇಶ ನೀಡಿ ಗೊಂದಲ ಸೃಷ್ಟಿ ಮಾಡುತ್ತಿದ್ದು, ಜನರನ್ನು ಮೊದಲು ವಿಶ್ವಾಸಕ್ಕೆ ತೆಗೆದುಕೊಂಡು ಆದೇಶ ನೀಡಬೇಕಿತ್ತು. ಆದರೆ, ರಾಜ್ಯ ಸರ್ಕಾರ ಅದನ್ನು ಮಾಡಲಿಲ್ಲ ಎಂದು ಕಿಡಿಕಾರಿದರು.
ಕೊರೊನಾಗೆ ಲಾಕ್ಡೌನ್ ಮದ್ದಲ್ಲ. ಕಳೆದ ಒಂದೂವರೆ ವರ್ಷಗಳಲ್ಲಿ ಕೊರೊನಾ ಎದುರಿಸಲು ಸಕಲ ಸಿದ್ಧತೆಗಳನ್ನು ಸರ್ಕಾರ ಮಾಡಬೇಕಿತ್ತು. ಈಗ ಆತುರಾತುರವಾಗಿ ಲಾಕ್ಡೌನ್ ಮಾಡಿ ಜನರನ್ನು ಸಂಕಷ್ಟದಲ್ಲಿಟ್ಟಿದ್ದಾರೆ. ಸೋಂಕಿತರು ಬೆಡ್ಗಾಗಿ ಅಲೆದಾಡುತ್ತಿದ್ದಾರೆ. ಬೆಡ್ ಕೊರತೆ ಕಾಣುತ್ತಿದೆ. ಮತ್ತೆ ಜನರು ಜನರಲ್ ವಾರ್ಡ್ ನಲ್ಲಿ ಸಾಯುವ ಪರಿಸ್ಥಿತಿ ಬರಬಹುದು. ನಾವು ಜನರನ್ನು ಐಸಿಯುಗೆ ಹೋಗಲು ಬಿಡಬಾರದು. ಸರ್ಕಾರ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಸಲಹೆ ನೀಡಿದರು.
ಕೊರೊನಾ ಸೋಂಕಿತರಿಗೆ ಅಗತ್ಯವಾಗಿ ಬೇಕಾಗುವುದು ಆಕ್ಸಿಜನ್ ಬೆಡ್, ಈಗ ಅದರ ಕೊರತೆಯಿಂದಾಗಿ ಜನರು ಸಾಯುತ್ತಿದ್ದಾರೆ. ಜನರು ಆಸ್ಪತ್ರೆಗೆ ಹೋದಾಗ ಸಕಲ ವ್ಯವಸ್ಥೆಯನ್ನು ಸರ್ಕಾರ ಮಾಡಬೇಕಿತ್ತು. ಸಮರ್ಪಕವಾಗಿ ವ್ಯಾಕ್ಸಿನೇಷನ್ ಆಗುತ್ತಿಲ್ಲ. ಆನ್‌ಲೈನ್‌ನಲ್ಲಿ ಅರ್ಜಿ ಹಾಕಿ ಅನ್ನುತ್ತಿದ್ದಾರೆ. ಆಸ್ಪತ್ರೆಗೆ ಹೋದಾಗ ಇಲ್ಲ ಅಂತಾರೆ. ಇದಕ್ಕೆ ಯಾರು ಹೊಣೆ ಎಂದು ಪ್ರಶ್ನೆ ಮಾಡಿದ ಖಾದರ್, ಕೊರೊನಾದಿಂದ ಸತ್ತರೆ ಅವರಿಗೆ ಅಂತ್ಯಕ್ರಿಯೆ ಮಾಡಲು ಸಕಲ ವ್ಯವಸ್ಥೆ ಮಾಡಬೇಕಾಗಿದೆ ಎಂದು ಆಗ್ರಹಿಸಿದರು.
ಜನರಿಗೆ ಧೈರ್ಯ, ಆತ್ಮವಿಶ್ವಾಸ ತುಂಬುವ ಕೆಲಸವನ್ನು ಸರ್ಕಾರ ಮಾಡಬೇಕಾಗಿದೆ. ಭಯಪಟ್ಟಲ್ಲಿ ಕೊರೊನಾ ದೂರ ಹೋಗುವುದಿಲ್ಲ. ಧೈರ್ಯದಿಂದ ಎದುರಿಸಬೇಕು ಎಂದರು.