ಬಂಟ್ವಾಳ : ಕೊರೊನಾಗೆ ಬಂಟ್ವಾಳ ತಾಲೂಕಿನಲ್ಲಿ 6ನೇ ಸಾವು ಸಂಭವಿಸಿದೆ. ಕಳೆದ ಕೆಲವು ದಿನಗಳಿಂದ ಸೋಂಕು ದೃಢಪಟ್ಟು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪುದು ಗ್ರಾಮದ ಮಾರಿಪಳ್ಳದ 85ರ ವೃದ್ಧ ಶನಿವಾರ ಮೃತಪಟ್ಟಿದ್ದು, ಇಂದು 11 ಮಂದಿಗೆ ಸೋಂಕು ದೃಢಪಟ್ಟಿದೆ.
ಹಲವು ವರ್ಷಗಳಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಕೆಲವು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಸೋಂಕು ದೃಢಪಟ್ಟಿತ್ತು. ಮೃತರ ಕುಟಂಬಕ್ಕೆ ಮಂಗಳೂರು ಶಾಸಕ ಯು ಟಿ ಖಾದರ್ ಸಾಂತ್ವನ ಹೇಳಿದ್ದು, ಅಂತಿಮ ವಿಧಿ, ವಿಧಾನಕ್ಕೆ ಸಹಕರಿಸಿದರು. ಈ ವೇಳೆ ಗ್ರಾಪಂ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಮತ್ತಿತರರು ಜೊತೆಯಲ್ಲಿದ್ದರು. ಇದುವರೆಗೆ ಬಂಟ್ವಾಳ ಕಸ್ಬಾ ಗ್ರಾಮದ 4 ಮಹಿಳೆಯರು, ಕಲ್ಲಡ್ಕದ 1 ಪುರುಷ ಕೊರೊನಾ ಸೋಂಕಿಗೆ ಬಲಿಯಾಗಿದ್ದರು.
ಕಳೆದ ಎರಡು ದಿನಗಳಲ್ಲಿ ಬಂಟ್ವಾಳ ತಾಲೂಕೊಂದರಲ್ಲಿಯೇ ಒಟ್ಟು 50 ಪ್ರಕರಣ ವರದಿಯಾಗಿದ್ದು, ಈವರೆಗೆ 75ಕ್ಕೂ ಅಧಿಕ ಮಂದಿಗೆ ಸೋಂಕು ತಗಲಿದೆ. ಬಂಟ್ವಾಳ ತಾಲೂಕಿನಲ್ಲಿ ಇಂದು ಒಟ್ಟು 11 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ಒಟ್ಟು 3 ಪ್ರಕರಣ ವರದಿಯಾಗಿವೆ.
ವಿಟ್ಲ ಕಸ್ಬಾ ಒಕ್ಕೆತ್ತೂರು 50 ವರ್ಷದ ಪುರುಷ, ಗೋಳ್ತಜಮಲು 63 ವರ್ಷದ ಪುರುಷ, ಅರ್ಕುಳ 44 ವರ್ಷದ ಪುರುಷ, ಬಂಟ್ವಾಳ ಬಿ.ಮೂಡದ 70 ವರ್ಷದ ವೃದ್ಧೆ, ಬಂಟ್ವಾಳ ಪೇಟೆ ಬಿ.ಕಸ್ಬಾ 56 ವರ್ಷದ ಪುರುಷ, ಬಂಟ್ವಾಳ ಪೇಟೆ ಬಿ.ಕಸ್ಬಾ 23 ವರ್ಷದ ಪುರುಷ, ಸಜಿಪ ನಗ್ರಿಯ 70 ವರ್ಷದ ಮಹಿಳೆ, ಪುದು ಗ್ರಾಮದ 52 ವರ್ಷದ ಪುರುಷ, ಪುದು ಗ್ರಾಮ 30 ವರ್ಷದ ಮಹಿಳೆ, ಕಂಬಳಬೆಟ್ಟು ವಿಟ್ಲದ 47 ವರ್ಷದ ಮಹಿಳೆ, ನಾವೂರಿನ 42 ವರ್ಷದ ಪುರುಷನಿಗೆ ಸೋಂಕು ತಗಲಿದೆ.