ಮಂಗಳೂರು: ದೆಹಲಿಯ ನಿಜಾಮುದ್ದೀನ್ ಧಾರ್ಮಿಕ ಸಭೆಗೆ ಹೋಗಿ ಬಂದಿದ್ದ ತೊಕ್ಕೊಟ್ಟು ಸ್ಮಾರ್ಟ್ ಪ್ಲಾನೆಟ್ ನಿವಾಸಿ ಸಲೀಂ ಹೆಗ್ಡೆ ವೆನ್ಲಾಕ್ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ವಾಪಸಾಗಿದ್ದಕ್ಕೆ ಅಲ್ಲಿನ ನಿವಾಸಿಗಳು ಚಪ್ಪಾಳೆ ತಟ್ಟಿ ಸ್ವಾಗತಿಸಿದರು.
ದೆಹಲಿಗೆ ತೆರಳಿರುವ ಟವರ್ ಲೊಕೇಷನ್ ಆಧಾರದಲ್ಲಿ ಸಲೀಂ ಹೆಗ್ಡೆಯನ್ನು ದೇರಳಕಟ್ಟೆಯಲ್ಲಿ ಕ್ವಾರಂಟೈನ್ನಲ್ಲಿ ಇಡಲಾಗಿತ್ತು. ಏ. 4 ರಂದು ಕೊರೊನಾ ಸೋಂಕು ದೃಢವಾದ ಹಿನ್ನೆಲೆ ವೆನ್ಲಾಕ್ ಆಸ್ಪತ್ರೆಗೆ ಸ್ಥಳಾಂತರಿಸಿ ಚಿಕಿತ್ಸೆ ಆರಂಭಿಸಲಾಗಿತ್ತು. ಈಗ ಎರಡನೇ ವರದಿಯಲ್ಲಿ ಕೋವಿಡ್-19 ನೆಗೆಟಿವ್ ಆಗಿರುವುದರಿಂದ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. ಸೋಂಕು ದೃಢವಾದಾಗಿನಿಂದ ತೊಕ್ಕೊಟ್ಟು ಸ್ಮಾರ್ಟ್ ಪ್ಲಾನೆಟ್ ಕಟ್ಟಡ ಲಾಕ್ಡೌನ್ ಮಾಡಲಾಗಿದೆ.
ಬಿಡುಗಡೆಗೊಂಡ ಸಲೀಂ ಹೆಗ್ಡೆ ಕೈಗೆ ಸೀಲ್ ಹಾಕಲಾಗಿದ್ದು, ಮುಂದಿನ 14 ದಿನಗಳ ಕಾಲ ಸಾರ್ವಜನಿಕರನ್ನು ಭೇಟಿ ಮಾಡುವುದನ್ನು ನಿರ್ಬಂಧಿಸಲಾಗಿದೆ. ವೆನ್ಲಾಕ್ ಸಿಬ್ಬಂದಿ ಹಾಗೂ ವೈದ್ಯರು ಉತ್ತಮವಾಗಿ ಶುಶ್ರೂಷೆ ನೀಡಿ, ಚೆನ್ನಾಗಿ ನೋಡಿಕೊಂಡಿದ್ದಾರೆ ಎಂದು ಎಲ್ಲಾ ಸಿಬ್ಬಂದಿ ಹಾಗೂ ವೈದ್ಯರಿಗೆ ಸಲೀಂ ಹೆಗ್ಡೆ ಅಭಿನಂದನೆ ಸಲ್ಲಿಸಿದ್ದಾರೆ.