ಮಂಗಳೂರು: ಜಗತ್ತನ್ನೇ ಕಾಡುತ್ತಿರುವ ಕೊರೊನಾ ಸೋಂಕಿನ ಬಗ್ಗೆ ಜಾಗೃತಿ ಮೂಡಿಸಲು ಸಾಕಷ್ಟು ಪ್ರಯತ್ನಗಳು ನಡೆಯುತ್ತಲೇ ಇವೆ. ಸರ್ಕಾರ ಸೇರಿದಂತೆ ಸಾಕಷ್ಟು ಜನರು ವಿವಿಧ ರೀತಿಯ ಪ್ರಯತ್ನಗಳ ಮೂಲಕ ಸೋಂಕಿನ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯ ನಡೆಸುತ್ತಿದ್ದಾರೆ. ಈ ಜಾಗೃತಿ ಪ್ರಯತ್ನಗಳಿಗೆ ಹೊಸ ಸೇರ್ಪಡೆ ಯಕ್ಷಗಾನ ಬೊಂಬೆಯಾಟ.
ಯಾವುದೇ ರೀತಿಯ ಭಿನ್ನ ಕಥಾಹಂದರವಿಲ್ಲದ ಈ ಪ್ರಸಂಗದಲ್ಲಿ, ಸೋಂಕು ಹರಡದಂತೆ ಕೈಶುಚಿಗೊಳಿಸುವುದು, ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಅನಗತ್ಯ ಹೊರಗಡೆ ತಿರುಗಾಡುವುದಕ್ಕೆ ಕಡಿವಾಣ ಹಾಕುವುದನ್ನು ಭಾರತೀಯ ಪುರಾಣಗಳ ಪರಿಕಲ್ಪನೆಯಡಿ ಪರಿಣಾಮಕಾರಿಯಾಗಿ ಚಿತ್ರಿಸಲಾಗಿದೆ.
ಸರ್ಕಾರದ ಆದೇಶವನ್ನು ಪಾಲಿಸುವ ಹಿನ್ನೆಲೆಯಲ್ಲಿ ಕೊರೊನಾ ಯಕ್ಷ ಜಾಗೃತಿ ಗೊಂಬೆಯಾಟವನ್ನು ಯಾವುದೇ ಪ್ರೇಕ್ಷಕರ ಎದುರು ಆಯೋಜನೆ ಮಾಡದೆ, ಕೇವಲ ವೀಡಿಯೋ ದಾಖಲೀಕರಣ ಮಾತ್ರ ಮಾಡಲಾಗಿದೆ. ಕನ್ನಡ, ಇಂಗ್ಲಿಷ್ ಹಾಗು ಹಿಂದಿ ಮೂರು ಭಾಷೆಗಳಲ್ಲಿ ಈ ಪ್ರದರ್ಶನವನ್ನು ತಯಾರು ಮಾಡಿ ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಲಾಗಿದೆ. ವಿಡಿಯೋವನ್ನು ಸಾವಿರಾರು ಮಂದಿ ವೀಕ್ಷಿಸಿದ್ದಾರೆ ಕೂಡಾ.
ಸಿರಿಬಾಗಿಲು ವೆಂಕಪ್ಪಯ್ಯ ಸ್ಮಾರಕ ಸಾಂಸ್ಕೃತಿಕ ಪ್ರತಿಷ್ಠಾನದ ಸಂಯೋಜನೆಯಲ್ಲಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದ ಕೆ.ವಿ.ರಮೇಶ್ ಈ ಪ್ರದರ್ಶನವನ್ನು ಆಯೋಜಿಸಿದ್ದಾರೆ.
ಕೊರೊನಾ ಯಕ್ಷ ಜಾಗೃತಿ ಬೊಂಬೆಯಾಟದ ಇಂಗ್ಲಿಷ್ ಆವೃತ್ತಿ ಯೂಟ್ಯೂಬ್ ವಿಡಿಯೋ ನಾಲ್ಕು ದಿನಗಳ ಹಿಂದೆ ಅಪ್ಲೋಡ್ ಆಗಿದ್ದು, ಈಗಾಗಲೇ 3,600 ಮಂದಿ ವೀಕ್ಷಿಸಿದ್ದಾರೆ. ಕನ್ನಡ ಆವೃತ್ತಿಯನ್ನು ನಿನ್ನೆ ಅಪ್ಲೋಡ್ ಮಾಡಲಾಗಿದ್ದು 1,100 ಮಂದಿ ವೀಕ್ಷಿಸಿದ್ದಾರೆ. ಹಿಂದಿ ಆವೃತ್ತಿಯನ್ನು ಎರಡು ದಿನದಲ್ಲಿ 405 ಮಂದಿ ವೀಕ್ಷಿಸಿದ್ದಾರೆ. ಈ ಪ್ರದರ್ಶನವನ್ನು ನೋಡಿದವರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.