ಮಂಗಳೂರು: ನಗರದ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತುಳುನಾಡಿನ ಕಾರಣಿಕ ಪುರುಷರಾದ ಕೋಟಿ-ಚೆನ್ನಯರ ಹೆಸರಿಡಲು ಒತ್ತಾಯಿಸಿ, ಮುಲ್ಕಿ-ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ಹಾಗೂ ದ.ಕ.ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಪಂಜಿನ ಮೆರವಣಿಗೆ ನಡೆಸಲಾಯಿತು.
ಮೆರವಣಿಗೆಯಲ್ಲಿ 500ಕ್ಕೂ ಅಧಿಕ ಜನರು ಭಾಗವಹಿಸಿ ಕಾಲ್ನಡಿಗೆ ಮೂಲಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಪಂಜಿನ ಮೆರವಣಿಗೆ ನಡೆಸಿದರು. ಮೆರವಣಿಗೆ ಸರ್ಕ್ಯೂಟ್ ಹೌಸ್ನಿಂದ ಯೆಯ್ಯಾಡಿ ಮೂಲಕ ಸಾಗಿ ಪಚ್ಚನಾಡಿ, ಬೋಂದೆಲ್, ಕಾವೂರು ಮಾರ್ಗವಾಗಿ ತೆರಳಿ ಬಜ್ಪೆ ಕೆಂಜಾರು ತನಕ ಪಂಜಿನ ತೆರಳಿತು.
ಮೆರವಣಿಗೆ ಉದ್ಘಾಟಿಸಿ ಮಾಜಿ ಸಚಿವ ರಮಾನಾಥ ರೈ ಮಾತನಾಡಿ, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದ.ಕ. ಜಿಲ್ಲೆಗೆ ಮಹತ್ವದ ಕೊಡುಗೆಗಳನ್ನು ನೀಡಿರುವ, ತುಳುನಾಡಿನ ಕಾರಣಿಕ ಪುರುಷರ ಹೆಸರನ್ನು ಇಡಬೇಕಿತ್ತು. ಇದಕ್ಕೆ ಬದಲು ಬಿಜೆಪಿ ಸರ್ಕಾರ ಈ ಜಿಲ್ಲೆಯ ಜನತೆಗೆ ಅವಮಾನ ಮಾಡುವ ರೀತಿಯಲ್ಲಿ ವಿಮಾನ ನಿಲ್ದಾಣವನ್ನು ಅದಾನಿ ಕಂಪೆನಿಗೆ ಮಾರಾಟ ಮಾಡಿದ್ದು ಮಾತ್ರವಲ್ಲ, ಅದಾನಿ ವಿಮಾನ ನಿಲ್ದಾಣ ಎಂದು ಹೆಸರು ಬದಲಾಯಿಸಲಾಗಿದೆ. ಇದನ್ನು ಕಂಡಾಗ ನಮಗೆ ನಾಚಿಕೆ, ಅವಮಾನವಾಗುತ್ತದೆ. ಆದರೆ ವಿಮಾನ ನಿಲ್ದಾಣವನ್ನು ಅದಾನಿ ಕಂಪೆನಿಗೆ ಮಾರಾಟ ಮಾಡುವಾಗ ಬಿಜೆಪಿ ಸರಕಾರಕ್ಕೆ ನಾಚಿಕೆಯಾಗಿಲ್ಲವಲ್ಲ ಎಂಬ ನೋವು ಆಗುತ್ತಿದೆ ಎಂದು ಹೇಳಿದರು.