ಅನಧಿಕೃತ ಗೂಡಂಗಡಿ ತೆರವು: ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ - ಅನಧಿಕೃತ ಗೂಡಂಗಡಿ ತೆರವು ಸುದ್ದಿ
ತೆರವುಗೊಳಿಸಿದ ಅಂಗಡಿಯವರಿಗೆ ಲಾಕ್ ಡೌನ್ ಮುಗಿಯುವವರೆಗೆ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡಬೇಕು. ನಂತರ ಕಾನೂನಿನ ಪ್ರಕಾರ ಅವರಿಗೆ ಸರಿಯಾದ ವ್ಯವಸ್ಥೆ ಮಾಡಿಕೊಡಬೇಕು ಎಂದು ಮಾಜಿ ಶಾಸಕ ವಸಂತ ಬಂಗೇರ ಆಗ್ರಹಿಸಿದರು.
ಬೆಳ್ತಂಗಡಿ(ದ.ಕ.) : ನಗರ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಅನಧಿಕೃತ ಹಣ್ಣು ಹಾಗೂ ಗೂಡಂಗಡಿಗಳನ್ನು ತೆರವುಗೊಳಿಸಿದ್ದರ ವಿರುದ್ಧ ಬೆಳ್ತಂಗಡಿ ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಮಾಜಿ ಶಾಸಕ ವಸಂತ ಬಂಗೇರ, ಯಾವುದೇ ಮಾಹಿತಿ ನೀಡದೇ ಲಾಕ್ಡೌನ್ ಸಮಯದಲ್ಲಿ ಅಂಗಡಿಗಳನ್ನು ತೆರವುಗೊಳಿಸಿರುವುದಕ್ಕೆ ನ.ಪಂ ಮುಖ್ಯಾಧಿಕಾರಿ ಸುಧಾಕರ್ ಅವರನ್ನು ತರಾಟೆಗೆ ತೆಗೆದುಕೊಂಡರು. ಅದಲ್ಲದೇ ತೆರವುಗೊಳಿಸಿದ ಅಂಗಡಿಯವರಿಗೆ ಲಾಕ್ಡೌನ್ ಮುಗಿಯುವವರೆಗೆ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡಬೇಕು. ನಂತರ ಕಾನೂನಿನ ಪ್ರಕಾರ ಅವರಿಗೆ ಸರಿಯಾದ ವ್ಯವಸ್ಥೆ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಮಾತನಾಡಿ, ಸಂಕಷ್ಟದ ಸಮಯದಲ್ಲಿ ಬಡ ವ್ಯಾಪಾರಿಗಳ ಅಂಗಡಿಗಳನ್ನು ತೆರವು ಮಾಡಿದ್ದು ಅಕ್ಷಮ್ಯ ಅಪರಾಧವಾಗಿದೆ. ಅಂಗವಿಕಲರು, ಹೆಂಗಸರು ಹಾಗೂ ಇನ್ನಿತರರು ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಾರೆ. ಅಂಗಡಿಗಳನ್ನು ತೆರೆಯಲು ಅವಕಾಶ ಕೊಡುವವರೆಗೆ ನಾವು ನಗರ ಪಂಚಾಯಿತಿ ಎದುರು ಧರಣಿ ಕುಳಿತು ಕೊಳ್ಳುತ್ತೇವೆ ಎಂದರು.
ಕೊನೆಗೆ ಸೀಮಿತ ದಿನಗಳವರೆಗೆ ಹಣ್ಣು ಅಂಗಡಿ ತೆರೆಯಲು ಮುಖ್ಯಾಧಿಕಾರಿ ಅನುಮತಿ ನೀಡಿದರು. ನಂತರ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಯಿತು.
ಬಳಿಕ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ನಗರ ಪಂಚಾಯಿತಿ ಮುಖ್ಯಾಧಿಕಾರಿ ಸುಧಾಕರ್, ಯಾವುದೇ ರೀತಿಯಲ್ಲೂ ಅವರ ಮೇಲೆ ದೌರ್ಜನ್ಯ ಎಸಗಿಲ್ಲ. ಕಾನೂನಿನ ಪ್ರಕಾರವೇ ತೆರವುಗೊಳಿಸಿದ್ದೇವೆ. ಹಲವು ಸಮಯಗಳಿಂದ ಅನಧಿಕೃತವಾಗಿ ವ್ಯಾಪಾರ ಮಾಡುತ್ತಿರುವ ಇವರಿಗೆ ಈ ಹಿಂದೆಯೇ ಎಚ್ಚರಿಕೆ ನೀಡಿದ್ದೆವು. ಆದರೆ, ಇದರ ಬಗ್ಗೆ ನಿರ್ಲಕ್ಷ ತೋರಿದ್ದಾರೆ. ಅದಲ್ಲದೇ ಲಾಕ್ ಡೌನ್ ಸಂದರ್ಭದಲ್ಲಿ ಸಾಮಾಜಿಕ ಅಂತರ ಹಾಗೂ ಇನ್ನಿತರ ಮುಂಜಾಗರೂಕತೆ ಕ್ರಮ ಪಾಲಿಸದೇ ವ್ಯಾಪಾರ ಮಾಡುತ್ತಿದ್ದರು. ಇದನ್ನೆಲ್ಲ ಗಮನಿಸಿ ತಹಶೀಲ್ದಾರ್ ಗಮನಕ್ಕೆ ತಂದು, ನಂತರ ಎಲ್ಲಾ ವ್ಯಾಪಾರಿಗಳಿಗೆ ಸೂಚಿಸಿ ಅವರ ಮುಖಾಂತರವೇ ತೆರವು ಕೆಲಸ ಮಾಡಿದ್ದೇವೆ. ಯಾವುದೇ ರೀತಿಯಲ್ಲೂ ಕಾನೂನಿಗೆ ವಿರುದ್ಧವಾಗಿ ನಾವು ವರ್ತಿಸಿಲ್ಲ ಎಂದು ಸ್ಪಷ್ಟನೆ ನೀಡಿದರು.