ಮಂಗಳೂರು: ಅನುಮತಿ ಇಲ್ಲದಿದ್ದರೂ ಮಾರ್ಚ್ ಫಾಸ್ಟ್ ನಡೆಸಿ ರಸ್ತೆ ಸಂಚಾರಕ್ಕೆ ತಡೆ ಉಂಟು ಮಾಡಿದ್ದಾರೆ ಹಾಗೂ ಸುಪ್ರೀಂ ಕೋರ್ಟ್ ತೀರ್ಪನ್ನು ಧಿಕ್ಕರಿಸಿ ಘೋಷಣೆ ಕೂಗಿದ್ದಾರೆಂದು ಆರೋಪಿಸಿ ಪಿಎಫ್ಐ ಸಂಘಟನೆಯ ಮುಖಂಡರ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಫೆ. 17ರಂದು ಪಿಎಫ್ಐ ಸಂಘಟನೆಯ ಧ್ವಜಾರೋಹಣ ಹಾಗೂ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಸಭಾ ಕಾರ್ಯಕ್ರಮ ನಡೆಸಲು ಮಾತ್ರ ಪೊಲೀಸ್ ಇಲಾಖೆ ಅನುಮತಿ ನೀಡಿತ್ತು. ಆದರೆ ಪಿಎಫ್ಐ ಮುಖಂಡರು ಅನುಮತಿ ಇಲ್ಲದಿದ್ದರೂ ಯುನಿಟಿ ಮಾರ್ಚ್ ನಡೆಸುವ ಬಗ್ಗೆ ಫ್ಲೆಕ್ಸ್, ಬ್ಯಾನರ್ ಅಳವಡಿಸಿದ್ದರು. ಅಲ್ಲದೆ, ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೂರ್ವ ನಿಯೋಜಿತವಾಗಿ ಪ್ರಚಾರ ನಡೆಸಿದ್ದಾರೆ ಎಂದು ಪೊಲೀಸ್ ಇನ್ಸ್ಪೆಕ್ಟರ್ ಪ್ರದೀಪ್ ಟಿ.ಆರ್. ದೂರಿನಲ್ಲಿ ತಿಳಿಸಿದ್ದಾರೆ.
ಓದಿ : ಪಿಎಫ್ಐ ವಿರುದ್ಧ ಮೊಕದ್ದಮೆ ದಾಖಲು: ಗೃಹಸಚಿವ ಬೊಮ್ಮಾಯಿ
ಉಳ್ಳಾಲದ ಮುಕ್ಕಚ್ಚೇರಿಯಿಂದ ಅನುಮತಿ ಇಲ್ಲದೆ ಮಾರ್ಚ್ ನಡೆಸಿ, ರಸ್ತೆ ಸಂಚಾರಕ್ಕೆ ತಡೆ ಉಂಟು ಮಾಡಲಾಗಿದೆ. ಜೊತೆಗೆ ಮಾರ್ಚ್ ನಡೆಸುವಾಗ ಆರ್ಎಸ್ಎಸ್ ವಿರುದ್ಧ ಘೋಷಣೆ ಕೂಗಿದ್ದಲ್ಲದೆ, ಸುಪ್ರೀಂ ಕೋರ್ಟ್ ತೀರ್ಪನ್ನು ಧಿಕ್ಕರಿಸಿ ಘೋಷಣೆ ಕೂಗಿದ್ದಾರೆ ಎಂದು ಆರೋಪಿಸಿ, ಯುನಿಟಿ ಮಾರ್ಚ್ನ ಆಯೋಜನೆ ಮತ್ತು ನೇತೃತ್ವ ವಹಿಸಿರುವ ಪಿಎಫ್ಐ ಮುಖಂಡರಾದ ಅಬ್ದುಲ್ ಖಾದರ್, ಶಾಹೀದ್ ದೇರಳಕಟ್ಟೆ, ಮುನೀಬ್ ಬೆಂಗ್ರೆ, ಖಲೀಲ್ ಕಡಪ್ಪುರ, ಇಮ್ತಿಯಾಝ್ ಕೋಟೆಪುರ, ರಮೀಝ್ ಕೋಡಿ, ಯುನಿಟಿ ಮಾರ್ಚ್ ಕಮಾಂಡರ್ ಸಫ್ವಾನ್ ಹಾಗೂ ಮತ್ತಿತರರ ಮೇಲೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.