ಪುತ್ತೂರು: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು 24 ಮಂದಿ ಜನರನ್ನು ಹತ್ಯೆ ಮಾಡಿರುವುದಾಗಿ ಸುಳ್ಳು ಆರೋಪ ಮಾಡಿರುವ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪುತ್ತೂರು ನಗರಸಭೆ ಸದಸ್ಯ ಮೊಹಮ್ಮದ್ ರಿಯಾಜ್ ಕೆ ಅವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮೇ 22ರಂದು ಬೆಳ್ತಂಗಡಿಯಲ್ಲಿ ನಡೆದ ಬಿಜೆಪಿಯ ವಿಜಯೋತ್ಸವ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ ಅವರು, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು 24 ಜನರನ್ನು ಹತ್ಯೆ ಮಾಡಿರುವುದಾಗಿ ಹೇಳಿದ್ದಾರೆ. ಈ ಕುರಿತು ವಿಡಿಯೋ ಚಿತ್ರಣವೂ ಇದೆ. ಮುಖ್ಯಮಂತ್ರಿಗಳ ವಿರುದ್ಧ ಈ ರೀತಿಯ ಆರೋಪ ಮಾಡಿರುವುದು ಸರಿಯಲ್ಲ. ಆದ್ದರಿಂದ ಹರೀಶ್ ಪೂಂಜ ಅವರನ್ನು ತನಿಖೆ ಮಾಡಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ದೂರಿನಲ್ಲಿ ಆಗ್ರಹಿಸಿದ್ದಾರೆ. ದೂರು ನೀಡುವ ಸಂದರ್ಭ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ರೋಶನ್ ರೈ ಬನ್ನೂರು, ನಗರ ಯೂತ್ ಕಾಂಗ್ರೆಸ್ ಅಧ್ಯಕ್ಷ ಮೋನು ಬಪ್ಪಳಿಗೆ ಜೊತೆಗಿದ್ದರು.
ಇದನ್ನೂ ಓದಿ: ಗೋಹತ್ಯೆ, ಮತಾಂತರ ನಿಷೇಧ ಬಿಲ್ ಮರು ಪರಿಶೀಲನೆ, ಶಾಂತಿ ಕದಡುವ ಸಂಘಟನೆಗಳ ವಿರುದ್ಧ ಕ್ರಮ: ಪ್ರಿಯಾಂಕ್ ಖರ್ಗೆ
ಹರೀಶ್ ಪೂಂಜಾ ಗಂಭೀರ ಆರೋಪ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 24 ಹಿಂದೂ ಕಾರ್ಯಕರ್ತರ ಕೊಲೆ ಮಾಡಿದ್ದಾರೆ ಎಂದು ಶಾಸಕ ಬಿಜೆಪಿ ಹರೀಶ್ ಪೂಂಜಾ ಗಂಭೀರ ಆರೋಪ ಮಾಡಿದ್ದರು ಎಂದು ಆರೋಪಿಸಲಾಗಿದೆ. ಇತ್ತೀಚೆಗೆ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಪ್ರಚಾರ ನಡೆಸಿದ ಹಿಂದೂ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ ನಾಯಕರ ವಿರುದ್ಧ ಟೀಕೆ ಮಾಡುವ ಭರದಲ್ಲಿ ಹರೀಶ್ ಪೂಂಜಾ ಈ ವಿವಾದಿತ ಹೇಳಿಕೆ ನೀಡಿದ್ದರು ಎನ್ನಲಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
"ಸತ್ಯಜಿತ್ ಸುರತ್ಕಲ್ ಎಂಬ ಹಿಂದೂ ನಾಯಕ ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದಾರೆ. ನಾನು ಹಿಂದುತ್ವಕ್ಕೆ ದ್ರೋಹ ಮಾಡಿದ್ದರೆ, ಇಲ್ಲಿ ಬಂದು ನನ್ನನ್ನು ಸೋಲಿಸಲು ಸತ್ಯಣ್ಣ ಯತ್ನಿಸಿದರೆ ನಾನೂ ಒಪ್ಪಿಕೊಳ್ಳುತ್ತಿದ್ದೆ. ನಾನು ಹಿಂದುತ್ವದ ಸಿದ್ಧಾಂತವನ್ನು ಬಿಟ್ಟಿದ್ದರೆ, ಹಿಂದುತ್ವದ ವಿರುದ್ಧವಾಗಿ ಕಾಂಗ್ರೆಸ್ಗೆ ಮತ ಕೇಳಿದ್ದರೆ ನಾನು ಒಪ್ಪುತ್ತಿದ್ದೆ. ಆದರೆ, 24 ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡಿದ ಸಿದ್ದರಾಮಯ್ಯನವರಿಗೆ ನೀವು ಮತ ಕೇಳಿದ್ದೀರಿ. ಬಜರಂಗದಳ ಬ್ಯಾನ್ ಮಾಡುತ್ತೇವೆ ಎಂದ ಕಾಂಗ್ರೆಸ್ ಪರ ಮತ ಕೇಳಿದ್ದೀರಿ. ನಿಮ್ಮದು ಯಾವ ರೀತಿಯ ಹಿಂದುತ್ವ ಎಂದು ಜನ ಕೇಳುತ್ತಿದ್ದಾರೆ'' ಎಂದು ವಾಗ್ದಾಳಿ ನಡೆಸಿದ್ದರು. ಇವರ ಹೇಳಿಕೆ ಖಂಡಿಸಿರುವ ಪುತ್ತೂರು ನಗರಸಭೆ ಸದಸ್ಯ ಮೊಹಮ್ಮದ್ ರಿಯಾಜ್ ಕೆ ಅವರು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಇಂದು ದೂರು ನೀಡಿದ್ದಾರೆ.
ಹರೀಶ್ ಪೂಂಜಾ ವಿರುದ್ಧ ಪ್ರಕರಣ ದಾಖಲು: ಇದೇ ಪ್ರಕರಣ ಸಂಬಂಧ ಶಾಸಕ ಹರೀಶ್ ಪೂಂಜಾ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮಿತಾ ಕೆ ಪೂಜಾರಿ ಎಂಬವರು ಬೆಳ್ತಂಗಡಿ ಠಾಣೆಯಲ್ಲಿ ಈ ದೂರು ದಾಖಲಿಸಿದ್ದರು. ಮೇ. 22 ರಂದು ಬೆಳ್ತಂಗಡಿ ಕಿನ್ಯಮ್ಮ ಸಭಾಭವನದಲ್ಲಿ ಬಿಜೆಪಿ ಪಕ್ಷದ ವತಿಯಿಂದ ನಡೆದ ಅಭಿನಂದನಾ ಕಾರ್ಯಕ್ರಮ ದಲ್ಲಿ ಹರೀಶ್ ಪೂಂಜಾ ಅವರು, ಕೋಮು ಪ್ರಚೋದಕ ಹಾಗೂ ವರ್ಗ ವರ್ಗಗಳ ನಡುವೆ ದ್ವೇಷ ಉಂಟಾಗುವಂತಹ ಭಾಷಣ ಮಾಡಿದ ಮಾಡಿದ ಬಗ್ಗೆ ಹಾಗೂ ಕಾರ್ಯಕ್ರಮ ಆಯೋಜಿಸಿದ್ದ ಜಯಂತ್ ಕೋಟ್ಯಾನ್ ಎಂಬುವರ ವಿರುದ್ಧ ದೂರನ್ನು ನೀಡಿದ್ದರು. ಈ ದೂರಿನನ್ವಯ ಬೆಳ್ತಂಗಡಿ ಠಾಣೆಯಲ್ಲಿ CR No 39/23 ಕಲಂ 153, 153A, 505 IPC ನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಭದ್ರನೆಲೆಯಲ್ಲಿ ಬಿಜೆಪಿಗೆ 2 ಕ್ಷೇತ್ರ ನಷ್ಟ: ಇತ್ತೀಚೆಗಷ್ಟೆ ಹೊರಬಿದ್ದ ರಾಜ್ಯ ವಿಧಾನಸಭೆ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿಯ ಭದ್ರಕೋಟೆ ಎಂದೇ ಕರೆಸಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚು ಕಡಿಮೆ ಸಮಬಲ ಕಾಯ್ದುಕೊಂಡಿದೆ. ಜಿಲ್ಲೆಯ ಒಟ್ಟು 8 ವಿಧಾನಸಭಾ ಕ್ಷೇತ್ರಗಳಲ್ಲಿ 6 ಸ್ಥಾನಗಳನ್ನು ಬಿಜೆಪಿ ಪಡೆದುಕೊಂಡರೆ 2 ಕ್ಷೇತ್ರ 'ಕೈ' ವಶವಾಗಿವೆ. ಕಳೆದ ಚುನಾವಣೆಗೆ ಹೋಲಿಸಿದರೆ ಈ ಬಾರಿ ಬಿಜೆಪಿಗೆ ಒಂದು ಸ್ಥಾನ ನಷ್ಟವಾಗಿದೆ.
ಇದನ್ನೂ ಓದಿ: ಕಿರಿಯ ವಯಸ್ಸಿನಲ್ಲೇ ಸಭಾಧ್ಯಕ್ಷ ಸ್ಥಾನದ ಜವಾಬ್ದಾರಿ ಸಿಕ್ಕಿರುವುದು ನನ್ನ ಸೌಭಾಗ್ಯ : ಸ್ಪೀಕರ್ ಯು ಟಿ ಖಾದರ್