ಮಂಗಳೂರು : ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದಲ್ಲಿ ಗಾಯಗೊಂಡ ಪುರುಷೋತ್ತಮ್ ಪೂಜಾರಿ ಅವರಿಗೆ ನನ್ನ ವೈಯಕ್ತಿಕ ನೆಲೆಯಿಂದ ಹೊಸ ರಿಕ್ಷಾ ಮತ್ತು ಪಕ್ಷದ ಕಡೆಯಿಂದ 5 ಲಕ್ಷ ರೂ ನೀಡಲಾಗುವುದು ಎಂದು ಶಾಸಕ ವೇದವ್ಯಾಸ ಕಾಮತ್ ತಿಳಿಸಿದರು. ನಗರದ ಉಜ್ಜೋಡಿಯಲ್ಲಿ ಬಾಂಬ್ ಸ್ಪೋಟದ ಸಂತ್ರಸ್ತ ಗಾಯಾಳು ಪುರುಷೋತ್ತಮ ಪೂಜಾರಿ ಅವರ ಮನೆಗೆ ಭೇಟಿ ನೀಡಿ, ಆರೋಗ್ಯ ವಿಚಾರಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದರು.
ಶಾಸಕ ವೇದವ್ಯಾಸ್ ಕಾಮತ್ ಅವರಿಂದ ರಿಕ್ಷಾ : ಪುರುಷೋತ್ತಮ ಪೂಜಾರಿ ಅವರ ರಿಕ್ಷಾ ಬಾಂಬ್ ಸ್ಪೋಟದಿಂದ ಹಾನಿಯಾಗಿದೆ. ನನ್ನ ವೈಯಕ್ತಿಕ ನೆಲೆಯಿಂದ ಅವರಿಗೆ ಹೊಸ ರಿಕ್ಷಾ ನೀಡಲಾಗುವುದು. ಇದಕ್ಕಾಗಿ ಇಂದು ಆರ್ಟಿಒ ಅವರನ್ನು ಇಲ್ಲಿಗೆ ಕರೆಸಲಾಗಿದೆ. ಪುರುಷೋತ್ತಮ ಪೂಜಾರಿ ಅವರ ಹಳೆಯ ರಿಕ್ಷಾದ ಪರ್ಮಿಟ್ ನ್ನು ನೀಡಿ ಹೊಸ ರಿಕ್ಷಾವನ್ನು ನೀಡಲಾಗುವುದು. ಇದಕ್ಕೆ ತಗುಲುವ ರೂ 3 ಲಕ್ಷ ರೂವನ್ನು ಶಾಸಕನ ನೆಲೆಯಲ್ಲಿ ನನ್ನ ವೈಯಕ್ತಿಕ ನಿಧಿಯಿಂದ ನೀಡುತ್ತೇನೆ ಎಂದು ಹೇಳಿದರು.
ಅದೇ ರೀತಿ ಪುರುಷೋತ್ತಮ ಪೂಜಾರಿ ಅವರ ಮುಂದಿನ ಜೀವನಕ್ಕಾಗಿ ಪಕ್ಷದ ನೆಲೆಯಿಂದ 5 ಲಕ್ಷ ರೂ ನೀಡಲು ನಿರ್ಧರಿಸಲಾಗಿದೆ. ರಿಕ್ಷಾವನ್ನು ಅವರ ಕುಟುಂಬಕ್ಕೆ ಹಸ್ತಾಂತರ ಮಾಡುವ ಸಂದರ್ಭದಲ್ಲಿ ಪಕ್ಷದ ನೆಲೆಯಲ್ಲಿ 5 ಲಕ್ಷ ರೂ ನೀಡಲಾಗುವುದು ಎಂದು ಇದೇ ವೇಳೆ ತಿಳಿಸಿದರು.
ಬಿಜೆಪಿ ವತಿಯಿಂದ 5 ಲಕ್ಷ ಪರಿಹಾರ : ಇನ್ನು ಸರಕಾರದಿಂದ ಪುರುಷೋತ್ತಮ ಪೂಜಾರಿ ಅವರಿಗೆ ಪರಿಹಾರ ನೀಡುವ ಬಗ್ಗೆ ಜಿಲ್ಲಾಧಿಕಾರಿಗಳು ಸರಕಾರಕ್ಕೆ ದಾಖಲೆಗಳನ್ನು ಕಳುಹಿಸಿ ಕೊಟ್ಟಿದ್ದಾರೆ. ಈ ವಿಚಾರವನ್ನು ಮುಖ್ಯಮಂತ್ರಿಗಳ ಗಮನಕ್ಕೂ ತರಲಾಗಿದೆ. ಪರಿಹಾರ ಕೊಡುವ ನಿಟ್ಟಿನಲ್ಲಿ ಉಸ್ತುವಾರಿ ಸಚಿವರು ಮಾತನಾಡಿದ್ದಾರೆ. ವಾರದೊಳಗೆ ಪರಿಹಾರ ಘೋಷಣೆ ಆಗುವ ನಿರೀಕ್ಷೆ ಇದೆ ಎಂದು ತಿಳಿಸಿದರು. ಇನ್ನೂ ಮೇ ತಿಂಗಳಲ್ಲಿ ಪುರುಷೋತ್ತಮ ಪೂಜಾರಿ ಅವರ ಮಗಳ ಮದುವೆ ಇದೆ. ಈ ಮದುವೆಗೆ ಸಂಬಂಧಿಸಿದಂತೆ ನಮ್ಮಿಂದ ಆಗುವ ಸಹಕಾರ ನೀಡಲಾಗುವುದು ಎಂದರು.
ಅವರೇ ಚಿಕಿತ್ಸಾ ವೆಚ್ಚವನ್ನು ಪಾವತಿಸಿದ್ದಾರೆ : ಇನ್ನೂ ಚಿಕಿತ್ಸಾ ವೆಚ್ಚವನ್ನು ಇಎಎಸ್ಐ ನಿಂದ ಪಾವತಿಸಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಚಿಕಿತ್ಸಾ ವೆಚ್ಚವನ್ನು ಸರಕಾರದಿಂದ ಭರಿಸಲಾಗುವುದು ಎಂದು ತಿಳಿಸಲಾಗಿತ್ತು. ಅವರಲ್ಲಿ ಆಸ್ಪತ್ರೆಯವರು ಬಿಲ್ ಕಟ್ಟಲು ಹೇಳಿಲ್ಲ. ಆದರೆ, ಅವರೇ ನಮ್ಮಲ್ಲಿ ಇಎಸ್ಐ ಇದೆ ಎಂದು ಅದು ವ್ಯರ್ಥವಾಗುವುದು ಬೇಡ ಎಂದು ಇಎಸ್ಐ ಸೌಲಭ್ಯ ಪಡೆದುಕೊಂಡಿದ್ದಾರೆ. ನಾವು ಇಎಸ್ಐ ಮೂಲಕ ಕಟ್ಟಿ ಎಂದು ಹೇಳಿಲ್ಲ. ಚಿಕಿತ್ಸಾ ವೆಚ್ಚವನ್ನು ಹಂತಹಂತವಾಗಿ ಬಿಡುಗಡೆ ಮಾಡಲು ಆಗುವುದಿಲ್ಲ ಎಂದು ಹೇಳಿದರು.ಈ ವಿಚಾರದಲ್ಲಿ ಕೆಲವರು ರಾಜಕೀಯ ಮಾಡುತ್ತಿದ್ದಾರೆ. ಇದರಲ್ಲಿ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ ಎಂದರು.
ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟ : ಕಳೆದ ನವೆಂಬರ್ 19 ರಂದು ನಗರದ ಗರೋಡಿ ಬಳಿ ಕುಕ್ಕರ್ ಬಾಂಬ್ ಸ್ಪೋಟಗೊಂಡಿತ್ತು. ಶಂಕಿತ ಉಗ್ರ ಶಾರೀಕ್ ಕುಕ್ಕರ್ ಬಾಂಬ್ ನೊಂದಿಗೆ ಪುರುಷೋತ್ತಮ್ ಅವರ ರಿಕ್ಷಾ ಏರಿದ್ದ. ಈ ವೇಳೆ ಶಾರೀಕ್ ಬಳಿಯಿದ್ದ ಕುಕ್ಕರ್ ಬಾಂಬ್ ರಿಕ್ಷಾದಲ್ಲಿಯೆ ಸ್ಪೋಟಗೊಂಡಿತ್ತು. ಘಟನೆಯಲ್ಲಿ ಉಗ್ರ ಶಾರೀಕ್ ಮತ್ತು ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಅವರಿಗೆ ಸುಟ್ಟ ಗಾಯಗಳಾಗಿದ್ದವು. ಬಳಿಕ ಶಾರೀಕ್ ಮತ್ತು ಪುರುಷೋತ್ತಮ ಅವರನ್ನು ಇಲ್ಲಿನ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಸದ್ಯ ಆಟೋ ಚಾಲಕ ಪುರುಷೋತ್ತಮ್ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನು ಸರಕಾರದಿಂದ ಚಿಕಿತ್ಸಾ ವೆಚ್ಚ ನೀಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ವೇದವ್ಯಾಸ್ ಕಾಮತ್ ಭರವಸೆ ನೀಡಿದ್ದಾರೆ.
ಇದನ್ನೂ ಓದಿ : ಮುಂದಿನ ಜೀವನ ದೇವರೇ ಗತಿ.. ಕುಕ್ಕರ್ ಬಾಂಬ್ ಸ್ಫೋಟದಲ್ಲಿ ಗಾಯಗೊಂಡ ಪುರುಷೋತ್ತಮ ಪೂಜಾರಿ ಅಳಲು