ಪುತ್ತೂರು (ದಕ್ಷಿಣ ಕನ್ನಡ): ವಿಶೇಷ ಹಬ್ಬದ ದಿನಗಳಲ್ಲಿ ಬಾಯಲ್ಲಿ ನೀರೂರಿಸುವ ಹೋಳಿಗೆ ಸಿಹಿ ಈಗ ಮಲೆನಾಡ ಅಡಕೆ ಮತ್ತು ಕೊಕ್ಕೊ ಹಣ್ಣಿನ ಬೀಜದಿಂದಲೂ ತಯಾರಾಗುತ್ತಿದೆ. ಚಾಕೊಲೇಟ್ ತಯಾರಿಸಲು ಉಪಯೋಗಿಸುವ ಕೊಕ್ಕೊ ಮತ್ತು ಅಡಕೆಯಿಂದ ಹೋಳಿಗೆ ತಯಾರಿಸಿ ತಮ್ಮ ಮೊದಲ ಪ್ರಯೋಗದಲ್ಲೇ ಬಂಟ್ವಾಳ ತಾಲೂಕಿನ ವೆಂಕಟರಮಣ ಪುಣಚ ಮತ್ತು ಪುತ್ತೂರಿನ ಶ್ರೀಕೃಷ್ಣ ಶಾಸ್ತ್ರಿ ಯಶಸ್ವಿಯಾಗಿದ್ದಾರೆ.
ಅಡಕೆ ಹಾಗೂ ಕೊಕ್ಕೊ ಬಳಸಿ ಹೋಳಿಗೆ ಮಾಡಿರುವ ಶ್ರೀಕೃಷ್ಣ ಶಾಸ್ತ್ರಿ ಶೀಘ್ರದಲ್ಲೇ ಅಡಕೆ ಹಾಗೂ ಕೊಕ್ಕೊ ಹೋಳಿಗೆ ಉದ್ಯಮ ಆರಂಭಿಸಲು ಮುಂದಾಗಿದ್ದಾರೆ. 10 ವರ್ಷಗಳಿಂದ ಪಾಕಶಾಸ್ತ್ರಜ್ಞರಾಗಿ ಹೆಸರಾಗಿರುವ ಇವರು, ಕೊಕ್ಕೊ ಹೋಳಿಗೆ ತಯಾರಿಸಿದ್ದರು. ಬಳಿಕ ಈ ಹೊಳಿಗೆಗೆ ಭಾರಿ ಬೇಡಿಕೆ ಕೇಳಿಬಂದ ಹಿನ್ನೆಲೆ ಇದನ್ನೇ ಉದ್ಯಮವಾಗಿ ಮುಂದುವರಿಸಲು ಸಿದ್ಧತೆ ನಡೆಸಿದ್ದಾರೆ.
ಅಡಕೆ ಹಾಗೂ ಕೊಕ್ಕೊ ಬಳಸಿ ಈಗಾಗಲೇ ಮಾರುಕಟ್ಟೆಯಲ್ಲಿ ಹಲವು ಖಾದ್ಯಗಳು, ಪಾನೀಯಗಳು ಲಭ್ಯ ಇವೆ. ಆದರೆ, ಈ ಎರಡು ವಸ್ತುಗಳನ್ನ ಬಳಸಿ ಹೋಳಿಗೆ ಮಾಡುವ ಯೋಜನೆ ಹಾಕಿದ್ದರಂತೆ. ಅದರಲ್ಲೀಗ ಯಶಸ್ವಿಯೂ ಆಗಿದ್ದಾರೆ. 250 ಗ್ರಾಂ ಡಬಲ್ ಚೋಲ್ ಚಾಲಿ ಅಡಕೆಯನ್ನು ತುಪ್ಪದೊಂದಿಗೆ ಬೆರೆಸಿ ನುಣ್ಣಗೆ ಹುಡಿ ಮಾಡಿ ಬಳಿಕ ಸಕ್ಕರೆ ಪಾಕಕ್ಕೆ ಸೇರಿಸಿ ಮೈದಾ ಮತ್ತಿತರ ಪೂರಕ ಸಾಮಗ್ರಿಗಳನ್ನು ಬಳಸಿ ಹೋಳಿಗೆ ತಯಾರಿಸಲಾಗುತ್ತದೆ.
250 ಗ್ರಾಂ ಅಡಕೆ ಮಿಶ್ರಣದಲ್ಲಿ 52 ಹೋಳಿಗೆ ತಯಾರಿಸಲು ಸಾಧ್ಯವಾಗಿದ್ದು, ಒಂದು ಕಿಲೋ ಅಡಕೆ ಬಳಸಿ ಸುಮಾರು 200 ಹೋಳಿಗೆ ತಯಾರಿಸಬಹುದು. ಹೋಳಿಗೆ ತಯಾರಿಕೆಗೆ ಬೇಕಾದ ಅಡಕೆಯನ್ನ ಅವರ ತೋಟದಲ್ಲಿಯೇ ಬೆಳೆಯುತ್ತಿದ್ದು, ಕೊಕ್ಕೊ ಬೀಜವನ್ನ ಮಾರುಕಟ್ಟೆಯಲ್ಲಿ ಕೊಂಡು ತರಬೇಕಿದೆ.
ಇದನ್ನೂ ಓದಿ: ಸಂಪರ್ಕ ರಸ್ತೆಯೇ ಇಲ್ಲದೇ ರೈಲಿನಡಿ ನುಗ್ಗಿ ಓಡಾಡುತ್ತಿರುವ ಜನ: ಇವರ ಸಂಕಷ್ಟಕ್ಕೆ ಕೊನೆ ಎಂದು?