ಮಂಗಳೂರು: ಮುಖ್ಯಮಂತ್ರಿಗಳು ನಿನ್ನೆ ಮಂಗಳೂರಿಗೆ ಭೇಟಿ ನೀಡಿದ್ದ ವೇಳೆ ಗೋಲಿಬಾರ್ ನಡೆಸಿದ ಪೊಲೀಸರ ಪರ ಮಾತನಾಡಿದ್ದಾರೆ. ಶಸ್ತ್ರಾಸ್ತ್ರಗಳಿದ್ದ ಬಂದರು ಠಾಣೆಯ ಕೊಠಡಿಗೆ ಪ್ರತಿಭಟನಾಕಾರರು ನುಗ್ಗಿದ ಹಿನ್ನೆಲೆ ಗೋಲಿಬಾರ್ ನಡೆಸಲಾಗಿದೆ ಎಂದು ಪೊಲೀಸರನ್ನು ಸಮರ್ಥಿಸಿ ಅವರಿಗೆ ಶಹಬ್ಬಾಸ್‌ಗಿರಿ ನೀಡಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಐವಾನ್ ಡಿಸೋಜ ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನ ಮೂವರು ಶಾಸಕರುಗಳು ಮುಖ್ಯಮಂತ್ರಿಗಳನ್ನು ನಿನ್ನೆ ಭೇಟಿ ಮಾಡಿ ಸಂತ್ರಸ್ತರಿಗೆ ಗರಿಷ್ಠ ಪರಿಹಾರ ಘೋಷಣೆ ಮಾಡಬೇಕೆಂದು ಆಗ್ರಹಿಸಿದ್ದೆವು. ಆದರೆ, ಮುಖ್ಯಮಂತ್ರಿಗಳು ಪರಿಹಾರ ಘೋಷಣೆ ಮಾಡದೆ ಹೋಗಿದ್ದು, ದ್ವಿಮುಖ ನೀತಿ ತೋರಿಸಿದ್ದಾರೆ. ರಾಜ್ಯ ಸರ್ಕಾರ ಸಂತ್ರಸ್ತರನ್ನು ನಿರ್ಲಕ್ಷ್ಯ ಮಾಡಿದೆ. ಈವರೆಗೆ ಉಸ್ತುವಾರಿ ಸಚಿವರು, ಶಾಸಕ ವೇದ ಕಾಮತ್ ಸಂತ್ರಸ್ತರ ಮನೆಗೆ ಭೇಟಿ ಮಾಡಿಲ್ಲ. ಆಸ್ಪತ್ರೆಗೆ ಹೋಗಿ ಗಾಯಾಳುಗಳನ್ನು ನೋಡಿಲ್ಲ ಎಂದು ಆರೋಪಿಸಿದರು. ಸರ್ಕಾರ ದ್ವೇಷದ ನೀತಿ ಅನುಸರಿಸುತ್ತಿದೆ. ಇದನ್ನು ಕಾಂಗ್ರೆಸ್ ಸುಲಭವಾಗಿ ಬಿಡುವುದಿಲ್ಲ ಎಂದು ಹೇಳಿದರು.