ಮಂಗಳೂರು: ಪೌರತ್ವ (ತಿದ್ದುಪಡಿ) ಕಾಯ್ದೆ ಕುರಿತು ಮಂಗಳೂರಿನಲ್ಲಿ ಉಂಟಾಗಿರುವ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದು ಮಧ್ಯಾಹ್ನ 3 ಗಂಟೆಯಿಂದ ಸಂಜೆ 6ರವರೆಗೆ ಕರ್ಫ್ಯೂ ಸಡಿಲಿಸಲಾಗುವುದು ಎಂದು ತಿಳಿಸಿದ್ದಾರೆ.
ಸಂಜೆ 6 ಗಂಟೆಯಿಂದ ಮತ್ತೆ ಕರ್ಫ್ಯೂ ಮುಂದುವರಿಯಲಿದ್ದು, ನಾಳೆ ಹಗಲು ಪೂರ್ತಿ ಯಾವುದೇ ಕರ್ಫ್ಯೂ ಇರುವುದಿಲ್ಲ ಎಂದು ತಿಳಿಸಿದ್ದು, ರಾತ್ರಿ ವೇಳೆ ಕರ್ಫ್ಯೂ ಇರಲಿದೆ ಎಂದಿದ್ದಾರೆ. ಜತೆಗೆ ಸೋಮವಾರ ನಗರದಲ್ಲಿ ಐಪಿಸಿ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ ಎಂಬ ಮಾಹಿತಿ ನೀಡಿದ್ದಾರೆ. ಇದೇ ವೇಳೆ ಕ್ರಿಸ್ಮಸ್ ವೇಳೆ ಜನರಿಗೆ ಯಾವುದೇ ರೀತಿಯ ತೊಂದರೆ ನೀಡದಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮಂಗಳೂರಿನಲ್ಲಿ ನಡೆದಿರುವ ಹಿಂಸಾಚಾರದ ಬಗ್ಗೆ ನಾನು ಅಧಿಕಾರಿಗಳಿಂದ ಸಂಪೂರ್ಣವಾದ ಮಾಹಿತಿ ಪಡೆದುಕೊಂಡಿದ್ದೇನೆ ಎಂದು ತಿಳಿಸಿರುವ ಅವರು, ಗೋಲಿಬಾರ್ನಲ್ಲಿ ಮೃತರಾಗಿರುವ ಬಗ್ಗೆ ಯಾವ ರೀತಿಯಾಗಿ ತನಿಖೆ ನಡೆಸಬೇಕು ಎಂಬುದರ ಕುರಿತು ಗೃಹ ಸಚಿವರೊಂದಿಗೆ ಇನ್ನೊಂದು ಸುತ್ತಿನ ಮಾತುಕತೆ ಬಳಿಕ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಇದೇ ವೇಳೆ ಮೃತಪಟ್ಟವರಿಗೆ ಯಾವ ರೀತಿಯಾಗಿ ಪರಿಹಾರ ನೀಡಬೇಕು. ಅದಕ್ಕೆ ಕಾನೂನಿನಲ್ಲಿ ಯಾವ ರೀತಿಯ ಕ್ರಮವಿದೆ ಎಂಬುದನ್ನ ಪರಾಮರ್ಶೆ ಮಾಡಿದ ಬಳಿಕ ಜಿಲ್ಲಾಧಿಕಾರಿ ಇದರ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದಿದ್ದಾರೆ.
ಇದೇ ವೇಳೆ ಕೇರಳ ಪತ್ರಕರ್ತರ ಆಗಮನದ ಬಗ್ಗೆ ತನಿಖೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ. ಇನ್ನು ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಬಿಎಸ್ವೈ ಅವರು ಜವಾಬ್ದಾರಿಯುತವಾಗಿ ಮಾತನಾಡಿ ಎಂದು ಹೇಳಿದ್ದಾರೆ.