ಮಂಗಳೂರು: ರಾಜ್ಯದಲ್ಲಿ 144 ಸೆಕ್ಷನ್ ಜಾರಿ ಮಾಡುವ ಮೂಲಕ ಸಂವಿಧಾನದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿದೆ ಎಂದು ಹೈಕೋರ್ಟ್ ಆದೇಶ ನೀಡಿದೆ. ಬಿಜೆಪಿ ರಾಜ್ಯಾಧ್ಯಕ್ಷರಿಗೆ, ಮುಖ್ಯಮಂತ್ರಿಗೆ ತಮ್ಮ ತಪ್ಪಿನ ಅರಿವಾಗಿ ರಾಜ್ಯದ ಜನತೆಯಲ್ಲಿ ಕ್ಷಮೆ ಯಾಚಿಸಬೇಕಿತ್ತು. ಆದರೆ ಇನ್ನೂ ಚಕಾರ ಎತ್ತಿಲ್ಲ. ನಿಮಗೇನಾದರೂ ಸಂವಿಧಾನದ ಬಗ್ಗೆ ಗೌರವಿದ್ದಲ್ಲಿ ಜನತೆಯ ಮುಂದೆ ಕ್ಷಮೆಯಾಚನೆ ಮಾಡಿ ಎಂದು ಕಾಂಗ್ರೆಸ್ ಮುಖಂಡ ಉಗ್ರಪ್ಪ ಆಗ್ರಹಿಸಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಆನಂದ್ ಸಿಂಗ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡು ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡಿದ್ದು ನಮ್ಮ ತಪ್ಪು. ಆದರೆ ಈಗ ಬಿಜೆಪಿ ಆನಂದ್ ಸಿಂಗ್ ಮೇಲೆ 15 ಕ್ರಿಮಿನಲ್ ಕೇಸ್ ಗಳಿದ್ದರೂ ಟಿಕೆಟ್ ನೀಡಿದೆ ಎಂದರು.
ಅಕ್ರಮ ಗಣಿಗಾರಿಕೆ, ಅರಣ್ಯ ಲೂಟಿ ಮುಂತಾದ ಕೇಸ್ ಗಳಿವೆ. ಯಡಿಯೂರಪ್ಪನವರೇ ಯಾವ ಉದ್ದೇಶಕ್ಕಾಗಿ ಆನಂದ್ ಸಿಂಗ್ ಅವರಿಗೆ ಟಿಕೆಟ್ ನೀಡಿದ್ದೀರಿ. ಅಲ್ಲದೆ ಅರಣ್ಯ ಲೂಟಿ ಮಾಡಿರುವ ಅವರಿಗೆ ಮತ್ತೆ ಅರಣ್ಯ ಸಚಿವ ಮಾಡಿದ್ದಾರೆಂದರೆ, ಮತ್ತಷ್ಟು ಅರಣ್ಯ ಲೂಟಿ ಮಾಡಲಿ ಅಂತನಾ? ಯಡಿಯೂರಪ್ಪನವರೇ ಈಗಲಾದರೂ ಈ ರಾಜ್ಯದ ಜನರ ಹಿತ ಕಾಪಾಡುವ ದೃಷ್ಟಿಯಿಂದ ಆನಂದ್ ಸಿಂಗ್ ನನ್ನು ಆ ಸ್ಥಾನದಿಂದ ವಜಾಗೊಳಿಸಿ ಎಂದು ಟೀಕಿಸಿದರು.
ಬಳ್ಳಾರಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಆರ್.ಅಶೋಕ್ ಅವರ ಮಗನ ಹೆಸರು ಕೇಳಿ ಬರುತ್ತಿದ್ದು, ಇದರ ಬಗ್ಗೆ ತನಿಖೆ ನಡೆಯಲಿ. ಆದರೆ ಬಳ್ಳಾರಿ ಎಸ್ ಪಿ ಅಪಘಾತದಲ್ಲಿ ಅಶೋಕ್ ಪುತ್ರನ ಪಾತ್ರ ಇಲ್ಲ ಎಂದು ಸುದ್ದಿಗೋಷ್ಠಿ ನಡೆಸಿ ಹೇಳುತ್ತಾರೆ. ಪೊಲೀಸರ ಈ ನಡೆ ನೋಡಿದಾಗ ಇಲಾಖೆಯನ್ನು ದುರ್ಬಳಕೆ ಮಾಡಿರೋದು ಸ್ಪಷ್ಟವಾಗುತ್ತದೆ. ಬಿಜೆಪಿ ಸರ್ಕಾರ ವ್ಯವಸ್ಥೆಯನ್ನು ದುರ್ಬಳಕೆ ಮಾಡುತ್ತಿದ್ದಾರೆ. ಇದರ ಬಗ್ಗೆ ನ್ಯಾಯಾಂಗ ತನಿಖೆ ನಡೆಯಲಿ ಎಂದು ಆಗ್ರಹಿಸಿದರು.