ಮಂಗಳೂರು: ಬೆಂಗಳೂರಿನ ರಾಜೀವ್‍ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಆಶ್ರಯದಲ್ಲಿ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದೊಂದಿಗೆ, ಅಸೋಸಿಯೇಷನ್ ಆಫ್ ಇಂಡಿಯನ್ ಯುನಿರ್ವಸಿಟಿಯ ಸಹಭಾಗಿತ್ವದಲ್ಲಿ ಸ್ವರಾಜ್ಯ ಮೈದಾನದಲ್ಲಿ ನಡೆದ 80ನೇ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್‍ಷಿಪ್‍ಗೆ ಇಂದು ತೆರೆ ಬಿದ್ದಿದೆ.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಒಲಂಪಿಕ್ನ ಮಾಜಿ ಓಟಗಾರ್ತಿ ಪಿ.ಟಿ. ಉಷಾ ಅವರನ್ನು ಸನ್ಮಾನಿಸಲಾಯಿತು. ಕ್ರೀಡಾಕೂಟದ ಆಯೋಜನೆ ಹಾಗೂ ಸಹಕಾರ ನೀಡಿದ್ದಕ್ಕಾಗಿ ಅಂತರ್ ವಿಶ್ವವಿದ್ಯಾಲಯದ ಪಟಿಯಾಲದ ಪಂಜಾಬಿ ವಿಶ್ವವಿದ್ಯಾನಿಲಯ, ಕ್ಯಾಲಿಕಟ್ ವಿಶ್ವವಿದ್ಯಾನಿಲಯ, ಅಮೃತ್ ಸರ್ ಗುರುನಾನಕ್ ವಿಶ್ವವಿದ್ಯಾನಿಲಯ, ಮಹಾರಾಜ್ ವಿಶ್ವವಿದ್ಯಾನಿಲಯ, ಕೊಟ್ಟಾಯಂನ ಎಂ.ಜಿ. ವಿಶ್ವವಿದ್ಯಾನಿಲಯ ಸೇರಿದಂತೆ ಮಂಗಳೂರು ವಿವಿಯ ತರಬೇತುದಾರರು ಹಾಗೂ ವ್ಯವಸ್ಥಾಪಕರನ್ನು ಸಮಾರೋಪ ಸಮಾರಂಭದಲ್ಲಿ ಗೌರವಿಸಲಾಯಿತು.
80ನೇ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯಗಳ ಅಥ್ಲೆಟಿಕ್ಸ್ನಲ್ಲಿ ಮಂಗಳೂರು ವಿವಿ ಚಾಂಪಿಯನ್ ಪಟ್ಟ ಮುಡುಗೇರಿಸಿಕೊಂಡಿತು. ಈ ಮೂಲಕ ಸತತ 4ನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಕೂಟದಲ್ಲಿ ಒಟ್ಟು 170 ಅಂಕ ಪಡೆದ ಮಂಗಳೂರು ವಿವಿ ಅಗ್ರಸ್ಥಾನ ಪಡೆದಿದ್ದು, 98.5 ಅಂಕ ಗಳಿಸಿದ ಚೆನ್ನೈನ ಮದ್ರಾಸ್ ವಿವಿ ದ್ವಿತೀಯ ಸ್ಥಾನ ಹಾಗೂ 80 ಅಂಕಗಳೊಂದಿಗೆ ಕೊಟ್ಟಾಯಂನ ಮಹಾತ್ಮ ಗಾಂಧಿ ವಿವಿ ತೃತೀಯ ಸ್ಥಾನಿಯಾಗಿ ಹೊರಹೊಮ್ಮಿದೆ. ಕ್ರೀಡಾಕೂಟದಲ್ಲಿ ಒಟ್ಟು 9 ಕೂಟ ದಾಖಲೆಗಳು ನಿರ್ಮಾಣಗೊಂಡಿದ್ದು, ಈ ಪೈಕಿ 4 ಕೂಟ ದಾಖಲೆಗಳನ್ನು ಬರೆದಿರುವ ಮಂಗಳೂರು ವಿವಿ ಒಟ್ಟು 9 ಚಿನ್ನ, 9 ಬೆಳ್ಳಿ ಹಾಗೂ 5 ಕಂಚಿನ ಪದಕ ಸೇರಿದಂತೆ ಒಟ್ಟು 23 ಪಡೆದ ಸಾಧನೆ ಮಾಡಿದೆ.