ಸುಳ್ಯ(ದಕ್ಷಿಣ ಕನ್ನಡ): ಹಲವು ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಲ್ಲದೆ ಶಾಲೆಗಳು ಮುಚ್ಚುವ ಹಂತದಲ್ಲಿವೆ. ಆದರೆ ಮಕ್ಕಳಿದ್ದರೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಊರಾದ ಚಾರ್ವಾಕ ಗ್ರಾಮದ ಕೊಪ್ಪ ಕಿರಿಯ ಪ್ರಾಥಮಿಕ ಶಾಲೆಗೆ ಖಾಯಂ ಶಿಕ್ಷಕರು ಇಲ್ಲದೇ ಮುಚ್ಚುವ ಹಂತಕ್ಕೆ ಬಂದಿದೆ. ಗ್ರಾಮೀಣ ಭಾಗದಲ್ಲಿರುವ ಈ ಶಾಲೆಯು ಒಂದು ವರ್ಷದಿಂದ ಶಿಕ್ಷಕರ ಕೊರತೆಯನ್ನು ಎದುರಿಸುತ್ತಿದೆ.
ಶಾಲಾಭಿವೃದ್ಧಿ ಸಮಿತಿ, ಶಿಕ್ಷಣ ಪ್ರೇಮಿಗಳ ಬೇಡಿಕೆಗೆ ಕ್ರಮ ಕೈಗೊಳ್ಳುವ ಭರವಸೆ ಶಿಕ್ಷಣಾಧಿಕಾರಿಗಳಿಂದ ದೊರೆತರೂ ಈತನಕ ಇದು ಅನುಷ್ಠಾನವಾಗಿಲ್ಲ ಎನ್ನುವ ಆರೋಪ ಕೇಳಿಬಂದಿದೆ. ಈ ಶಾಲೆಯಲ್ಲಿ ಸುಮಾರು 43 ವಿದ್ಯಾರ್ಥಿಗಳು ಇದ್ದು, ಲಾಕ್‌ಡೌನ್ ಬಳಿಕ ಶಾಲೆ ಆರಂಭವಾದಾಗಿನಿಂದ ಶಿಕ್ಷಕರ ಕೊರತೆ ಎದುರಾಗಿದೆ ಎಂದು ತಿಳಿದುಬಂದಿದೆ.
ಆರು ತಿಂಗಳ ಹಿಂದೆ ಈ ಶಾಲೆಗೆ ವಾರದ ಎಲ್ಲ ದಿನಗಳಲ್ಲಿ ಕುದ್ಮಾರು ಶಾಲಾ ಶಿಕ್ಷಕಿಯೋರ್ವರು ಆಗಮಿಸುತ್ತಿದ್ದರು. ಈ ಶಿಕ್ಷಕಿಗೆ ಕಳೆದ ಆರು ತಿಂಗಳ ಹಿಂದೆ ಬೆಳಂದೂರು ಶಾಲೆಗೆ ವರ್ಗಾವಣೆಯಾದ ಬಳಿಕ ವಾರದ ಒಂದು ದಿನ ಕೊಪ್ಪ ಶಾಲೆಗೆ ಬರುತ್ತಿರುವುದರಿಂದ ಇನ್ನುಳಿದ ದಿನಗಳಲ್ಲಿ ಶಾಲೆಯನ್ನು ಅತಿಥಿ ಶಿಕ್ಷಕರು ಮಾತ್ರ ತರಗತಿಗಳನ್ನು ನಿಭಾಯಿಸುತ್ತಿದ್ದರು.
ಅತಿಥಿ ಶಿಕ್ಷಕರನ್ನು ಶಾಲಾಭಿವೃದ್ಧಿ ಸಮಿತಿ ನೇಮಿಸಿಕೊಂಡು ಆರಂಭದ ದಿನಗಳಲ್ಲಿ ಸಂಬಳ ನೀಡುತ್ತಿತ್ತು. ಬಳಿಕ ಶಿಕ್ಷಣಾಧಿಕಾರಿಗಳಲ್ಲಿ ಮನವಿ ಮಾಡಿಕೊಂಡ ಮೇರೆಗೆ ಅವರನ್ನೇ ಅತಿಥಿ ಶಿಕ್ಷಕರನ್ನಾಗಿ ನೇಮಿಸಿಕೊಳ್ಳಲಾಯಿತು. ಈ ಶಿಕ್ಷಕರ ಅವಧಿಯು ಮಾರ್ಚ್ 31ಕ್ಕೆ ಅಂತ್ಯಗೊಂಡಿದೆ. ಹೀಗಾಗಿ ಈ ಶಿಕ್ಷಕರನ್ನು ಶಾಲಾಭಿವೃದ್ಧಿ ಸಮಿತಿ ವತಿಯಿಂದ ಸಂಬಳ ನೀಡಿ ಇರಿಸಿಕೊಳ್ಳಲಾಗುತ್ತಿದೆ.
ಇಲ್ಲಿನ ಖಾಯಂ ಶಿಕ್ಷಕರ ಕೊರತೆಯಿಂದಾಗಿ ಮುಂದಿನ ಶೈಕ್ಷಣಿಕ ವರ್ಷದ ಮಕ್ಕಳ ದಾಖಲಾತಿಗೂ ತೊಂದರೆಯಾಗುತ್ತಿದ್ದು, ತಕ್ಷಣ ಸಂಬಂಧಪಟ್ಟವರು ಕ್ರಮಕೈಗೊಳ್ಳಬೇಕು ಎಂದು ಶಾಲಾಭಿವೃದ್ಧಿ ಸಮಿತಿ ಆಗ್ರಹಿಸಿದೆ. ಇಲ್ಲವಾದಲ್ಲಿ ಈ ಭಾಗದ ಮಕ್ಕಳ ಪೋಷಕರು ತಮ್ಮ ಊರಿಂದ ಬೇರೆ ಪ್ರದೇಶದ ಖಾಸಗಿ, ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಮುಂದಿನ ವರ್ಷದಿಂದ ದಾಖಲಿಸುವ ಯೋಚನೆಯಲ್ಲಿದ್ದಾರೆ.
ಈ ದುಸ್ಥಿತಿಯನ್ನು ಹೋಗಲಾಡಿಲು ಸಂಬಂಧಪಟ್ಟವರು ಕೈಜೋಡಿಸಬೇಕು. ತಕ್ಷಣ ಈ ಬಗ್ಗೆ ಕ್ರಮಕೈಗೊಳ್ಳಬೇಕು ಇಲ್ಲವಾದಲ್ಲಿ ಬೀದಿಗಿಳಿದು ಪ್ರತಿಭಟಿಸಲಾಗುವುದು ಎನ್ನುವ ಎಚ್ಚರಿಕೆಯನ್ನು ಶಾಲಾಭಿವೃದ್ಧಿ ಸಮಿತಿ ನೀಡಿದೆ.
ಇದನ್ನೂ ಓದಿ: ಯಾದಗಿರಿ: ಬಸ್ ಸೌಕರ್ಯವಿಲ್ಲದೇ ವಿದ್ಯಾರ್ಥಿಗಳ ಪರದಾಟ