ಮಂಗಳೂರು: ಯುವಕನೊಬ್ಬ ಯೂಟ್ಯೂಬ್ ಚಾನೆಲ್ ಮಾಡಿ ವಿವಿಧ ವಿಷಯಗಳ ಕುರಿತು ಜಾಗೃತಿ ಮೂಡಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದಾನೆ.
ಮೂಡಬಿದಿರೆ ಗುಡ್ಡೆಯಂಗಡಿ ಗ್ರಾಮದ ರವಿ ಆಚಾರ್ಯ ಎಂಬ ಯುವಕ ತನ್ನದೇ ಲೆಗಸಿ ಫಿಲ್ಮ್ (legacy Films) ಹೆಸರಿನ ಯೂಟ್ಯೂಬ್ ಚಾನೆಲ್ ಮಾಡಿ ಅದರಲ್ಲಿ ಬೈಕ್ ರೈಡಿಂಗ್ , ವಿಶಿಷ್ಟ ಸ್ಥಳ, ದೇಸಿ ಅಡುಗೆ ಹಾಗೂ ಸಮಾಜ ಸೇವೆಯ ಕುರಿತು ಮಾಹಿತಿ ನೀಡುತ್ತಾ ಸಾಮಾಜಿಕ ಜಾಲತಾಣವನ್ನು ಉತ್ತಮ ಕಾರ್ಯಗಳಿಗೆ ಹೇಗೆ ಬಳಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾನೆ.
ಮೂಡಬಿದಿರೆಯ ಖಾಸಗಿ ಟಿವಿ ವಾಹಿನಿಯ ಕ್ಯಾಮರಾಮ್ಯಾನ್ ಆಗಿ ದುಡಿಯುತ್ತಿರುವ ರವಿ ಆಚಾರ್ಯ, ಉತ್ತಮ ಬೈಕ್ ರೈಡರ್ ಆಗಿದ್ದು, ತನ್ನ ಸ್ವಂತ ಹಿಮಾಲಯನ್ ರಾಯಲ್ ಎನ್ಫೀಲ್ಡ್ನಲ್ಲಿ ತನ್ನಿಬ್ಬರ ಗೆಳೆಯರ ಜೊತೆಗೂಡಿ ಲಡಾಖ್, ಶಿಮ್ಲಾ, ಪಂಜಾಬ್, ಗುಜರಾತ್ ರಾಜ್ಯಗಳನ್ನು ಬೈಕ್ನಲ್ಲೇ ಸುತ್ತಾಡಿ, ಅಲ್ಲಿನ ಆಚಾರ - ವಿಚಾರ ಸ೦ಸ್ಕೃತಿಯ ಕುರಿತು ವಿಡಿಯೋ ಮಾಡಿ ಅಪ್ಲೋಡ್ ಮಾಡಿದ್ದಾನೆ.
ವಿಡಿಯೋ ಮೂಲಕ ಸ್ವಚ್ಛತಾ ಜಾಗೃತಿ :
ಮೂಡಬಿದಿರೆಯ ಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದಾದ ಹೊಸನಾಡು ಕೊಡ್ಯಡ್ಕ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಬಳಿಯ ಕೇಮಾರ್ ಪರಿಸರ ಪ್ರಕೃತಿಯ ಸುಂದರ ತಾಣವಾಗಿದ್ದು, ಇಲ್ಲಿ ಸರ್ಕಾರಿ ಮೈದಾನವೊಂದಿದೆ. ಮಳೆಗಾಲದಲ್ಲಿ ಹಚ್ಚ ಹಸಿರಿನಿಂದ ಕಂಗೊಳಿಸುವ ಈ ಪ್ರದೇಶಕ್ಕೆ ಹಲವಾರು ಜನ ಆಗಮಿಸುತ್ತಾರೆ. ಹೀಗೆ ಬಂದವರು, ತಾವು ತಂದಿರುವ ತಿಂಡಿ, ತಿನಿಸುಗಳ ಪ್ಲಾಸ್ಟಿಕ್ ಕವರ್, ಹಾಗೂ ಮದ್ಯ, ಸಾಫ್ಟ್ ಡ್ರಿಂಕ್ಸ್ ಬಾಟಲಿಗಳನ್ನು ಇಲ್ಲೇ ಎಸೆದು ಹೋಗುತ್ತಾರೆ. ಇದರಿಂದಾಗಿ ಸುಂದರವಾದ ಪರಿಸರ ಕಸದ ಕೊಂಪೆಯಾಗಿ ಮಾರ್ಪಟ್ಟಿದೆ. ಈ ಕುರಿತು, ರವಿ ಆಚಾರ್ಯ ವಿಡಿಯೋ ಒಂದನ್ನು ಮಾಡಿ, ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ಅಪ್ಲೋಡ್ ಮಾಡಿದ್ದಾನೆ. ಅಲ್ಲದೇ, ಅಲ್ಲಿನ ಕಸ ಹೆಕ್ಕಿ ಸ್ವಚ್ಚಗೊಳಿಸುವ ಮೂಲಕ ಯಾರೂ ಕಸ ಹಾಕದಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾನೆ.
- https://www.youtube.com/watch?v=c7kktbjeNtk&feature=youtu.be
ರವಿ ಆಚಾಯ ಮಾಡಿರುವ ಸ್ವಚ್ಛತಾ ಜಾಗೃತಿಯ ವಿಡಿಯೋಗೆ ಕೇಮಾರು ಸ್ವಾಮೀಜಿ, ಪಾಲಡ್ಕ ಚರ್ಚ್ನ ಧರ್ಮಗುರು ಹಾಗೂ ಸ್ಥಳೀಯರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.