ಕುಕ್ಕೆ ಸುಬ್ರಹ್ಮಣ್ಯ: ಕಲ್ಲಪಣೆ ಎಂಬಲ್ಲಿನ ಕುಡಿಯುವ ನೀರಿನ ಶುದ್ಧೀಕರಣ ಘಟಕದಲ್ಲಿ ಸೋಮವಾರ ತಡರಾತ್ರಿ ಏಕಾಏಕಿ ದುರ್ವಾಸನೆ ಹೊರಬಂದಿತ್ತು. ಪರಿಣಾಮವಾಗಿ ಅನಿಲ ಸೋರಿಕೆಯಾಗಿರಬಹುದೆಂಬ ಸಂಶಯದಿಂದ ಸುತ್ತಮುತ್ತಲಿನ ಪರಿಸರದ ಮನೆಯವರು ತಡರಾತ್ರಿ ಮನೆಗಳಿಂದ ಹೊರ ಬಂದಿದ್ದಾರೆ. ರಾತ್ರಿ ಒಂದು ಗಂಟೆ ವೇಳೆಗೆ ಘಟಕದ ಸುತ್ತಲಿನ ವ್ಯಾಪ್ತಿಯಲ್ಲಿ ದುರ್ವಾಸನೆ ಬರಲಾರಂಭಿಸಿದೆ. ಇದರ ತೀವ್ರತೆಗೆ ಆಸುಪಾಸಿನಲ್ಲಿ ವಾಸಿಸುವ ಕುಟುಂಬಗಳ ಮನೆಯವರಿಗೆ ಉಸಿರಾಡಲು ಸಾಧ್ಯವಾಗುತ್ತಿರಲಿಲ್ಲ ಎನ್ನಲಾಗಿದೆ.
ನೀರು ಶುದ್ಧೀಕರಣ ಘಟಕದ ಹೊರಗಡೆ ಇದ್ದ ಗ್ಯಾಸ್ ಸಿಲಿಂಡರ್ನಿಂದ ಸ್ವಲ್ಪ ಪ್ರಮಾಣದಲ್ಲಿ ಕ್ಲೋರಿನ್ ಗ್ಯಾಸ್ ಸೋರಿಕೆಯಾದದ್ದು ಈ ಅವಾಂತರಗಳಿಗೆ ಕಾರಣ. ಬಳಿಕ ದೇವಸ್ಥಾನ ಆಡಳಿತ ಮಂಡಳಿಗೆ ಹಾಗೂ ಪೋಲೀಸರಿಗೆ ವಿಷಯ ತಿಳಿಸಲಾಯಿತು. ಈ ಬಗ್ಗೆ ಭಯಭೀತರಾದ ನಿವಾಸಿಗಳನ್ನು ಬೇರೆಡೆಗೆ ತೆರಳಲು ಸೂಚಿಸಲಾಯಿತು. ಅನೇಕರು ಸ್ವಲ್ಪ ದೂರದಲ್ಲಿರುವ ತಮ್ಮ ಬಂಧುಗಳ ಹಾಗೂ ಪರಿಚಯಸ್ಥರ ಮನೆಗಳಲ್ಲಿ ಆಶ್ರಯ ಪಡೆದರು. ಬಳಿಕ ಸುಳ್ಯದಿಂದ ಅಗ್ನಿಶಾಮಕ ದಳದವರು ಬಂದು ಪರಿಶೀಲನೆ ನಡೆಸಿದ್ದಾರೆ.
ಈ ಸಮಯದಲ್ಲಿ ಶುದ್ಧೀಕರಣ ಘಟಕದಿಂದ ಕ್ಲೋರಿನ್ ಸೋರಿಕೆಯಾಗಿರುವುದು ಕಂಡುಬಂದಿದ್ದು, ಬಳಿಕ ದುರಸ್ತಿಗೊಳಿಸಲಾಯಿತು. ಮನೆ ಬಿಟ್ಟ ಕಲ್ಲಪಣೆ ಪರಿಸರ ವಾಸಿಗಳು ಮತ್ತೆ ತಮ್ಮ ಮನೆಗಳಿಗೆ ತೆರಳಿದರು.
ಈ ಬಗ್ಗೆ ಈಟಿವಿ ಜೊತೆಗೆ ಮಾತನಾಡಿದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಉಪ ಕಾರ್ಯನಿರ್ವಾಹಣಾಧಿಕಾರಿ ಚಂದ್ರಶೇಖರ್ ಪೆರಾಳ್, "ಶುದ್ದೀಕರಣ ಘಟಕದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಗ್ಯಾಸ್ ಸೋರಿಕೆಯಾದದ್ದು ನಿಜ. ಆದರೆ ಕೂಡಲೇ ಸುಳ್ಯದಿಂದ ಅಗ್ನಿಶಾಮಕ ದಳದವರನ್ನು ಕರೆಸಿ ಎಲ್ಲಾ ಸರಿಪಡಿಸಲಾಗಿದೆ. ಯಾವುದೇ ಕಾರಣಕ್ಕೂ ಆತಂಕ ಪಡುವ ಅಗತ್ಯವೇ ಇಲ್ಲ" ಎಂಬುದಾಗಿ ತಿಳಿಸಿ ಆತಂಕ ನಿವಾರಣೆ ಮಾಡಿದ್ದಾರೆ.