ಸುಳ್ಯ: ಮಗು ಹಠ ಮಾಡುತ್ತಿದೆ ಎಂದು ಕೋಪಗೊಂಡ ಕ್ರೂರಿ ತಾಯಿಯೋರ್ವಳು ಮಗುವಿಗೆ ಬೆಂಕಿಯ ಬರೆ ಹಾಕಿದ್ದಾಳೆ. ನಾಲ್ಕು ವರ್ಷ ಐದು ತಿಂಗಳ ಪ್ರಾಯದ ಹೆಣ್ಣು ಮಗು ಇದಾಗಿದೆ. ಸುಳ್ಯದ ಗಾಂಧಿನಗರ ನಾವೂರು ನಿವಾಸಿಯಾದ ಮಹಿಳೆ ಕಾದ ಸೌಟಿನಿಂದ ತನ್ನ ಮಗುವಿಗೆ ಬರೆ ಎಳೆದಿದ್ದಾಳೆ. ಈಕೆ ಮೊದಲ ಗಂಡನಿಂದ ವಿಚ್ಛೇದನ ಪಡೆದು ಮಂಜೇಶ್ವರ ನಿವಾಸಿಯಾದ ಇನ್ನೊರ್ವನ ಜತೆ ವಾಸಿಸುತ್ತಿದ್ದಾಳೆ ಎಂದು ತಿಳಿದು ಬಂದಿದೆ.
ಪ್ರಸ್ತುತ ಆರೋಪಿ ಮಹಿಳೆ ತನ್ನ ತಾಯಿ ಮನೆ ಸುಳ್ಯದ ನಾವೂರಿನಲ್ಲಿ ಪುಟ್ಟ ಮಗುವಿನೊಂದಿಗೆ ವಾಸವಾಗಿದ್ದಳಂತೆ. ಸ್ಥಳೀಯರು ನೀಡಿದ ಮಾಹಿತಿಯ ಆಧಾರದಲ್ಲಿ ಸುಳ್ಯ ಸಿಡಿಪಿಒ ರಶ್ಮಿ ನೆಕ್ರಾಜೆ ಮಗುವಿನ ಮನೆಗೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮಗುವನ್ನು ಸಿಡಿಪಿಒ ನೇತೃತ್ವದಲ್ಲಿ ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದೆಲ್ಲದರ ನಡುವೆ ಅಧಿಕಾರಿಗಳ ಜೊತೆಗೂ ಸಹ ಆರೋಪಿ ದರ್ಪ ತೋರಿದ್ದಾಳೆ. ತಾನೇ ಸೌಟು ಕಾಯಿಸಿ ಗಾಯ ಮಾಡಿದ್ದು, ನೀವೇನು ಮಾಡಿಕೊಳ್ಳುತ್ತೀರಿ? ಎಂದಿದ್ದಾಳಂತೆ. ಈ ಬಗ್ಗೆ ಪ್ರಕರಣ ದಾಖಲಾದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಇದನ್ನೂ ಓದಿ: ಬಜಾಲಿನಲ್ಲಿ ಹಟ್ಟಿಗೆ ನುಗ್ಗಿ ದನ ಕಳವು ಪ್ರಕರಣ.. ಐವರು ಆರೋಪಿಗಳ ಬಂಧನ