ಕಡಬ: ಮೆದುಳಿನಲ್ಲಿ ರಕ್ತಸ್ರಾವ ಉಂಟಾಗಿ 11 ವರ್ಷದ ಬಾಲಕಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯ ಮೃತಪಟ್ಟ ದಾರುಣ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಂತೂರು ಎಂಬಲ್ಲಿ ನಡೆದಿದೆ.
ಕುಂತೂರು ಗ್ರಾಮದ ಮಣಿಕ್ಕಳ ನಿವಾಸಿ ಹಾಗೂ ಕುಂತೂರು ಪದವು ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಎಸ್. ಸೋಮನಾಥ ಗೌಡ ಹಾಗೂ ಕುಸುಮಾವತಿ ದಂಪತಿಗಳ ಪುತ್ರಿ ಅಪೇಕ್ಷಾ ಮೃತ ಬಾಲಕಿ. ಅಪೇಕ್ಷಾ ಕಳೆದ ಕೆಲವು ಸಮಯಗಳಿಂದ ತಲೆನೋವಿನಿಂದ ಬಳಲುತ್ತಿದ್ದಳು ಎನ್ನಲಾಗಿದೆ. ಇಂದು ಬೆಳಗ್ಗೆ ಬಾಲಕಿಗೆ ವಿಪರೀತ ತಲೆನೋವು ಕಾಣಿಸಿಕೊಂಡಿತ್ತು. ಕೂಡಲೇ ಪೋಷಕರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ, ವಿಧಿ ಎಂಬಂತೆ ಆಸ್ಪತ್ರೆಗೆ ಕರೆದೊಯ್ಯುವ ದಾರಿ ಮಧ್ಯೆ ಅಪೇಕ್ಷಾ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ.
ಕುಂತೂರು ಪದವು ಸರಕಾರಿ ಶಾಲೆಯಲ್ಲಿ ಐದನೇ ತರಗತಿಯಲ್ಲಿ ಓದುತ್ತಿರುವ ಅಪೇಕ್ಷಾ, ಕಲಿಕೆಯಲ್ಲಿ ಸೇರಿದಂತೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮುಂದಿದ್ದಳು. ನಿನ್ನೆ ತಾನು ಮಾಡಿದ ಹೋಂ ವರ್ಕ್ಗಳನ್ನು ಶಿಕ್ಷಕರಿಗೆ ತೋರಿಸುವ ಸಲುವಾಗಿ ತಂದೆಯ ಜೊತೆ ಶಾಲೆ ಹೋಗಿದ್ದಳು. ತನ್ನ ಸಹಪಾಠಿಗಳೊಂದಿಗೆ ಮಾತನಾಡಿ ಲವಲವಿಕೆಯಿಂದಲೇ ಮನೆಗೆ ಬಂದಿದ್ದಳು.
ಈ ಹಿಂದೆಯೂ ಕೆಲವೊಮ್ಮೆ ತಲೆನೋವಿನಿಂದ ಬಳಲುತ್ತಿದ್ದ ಮಗುವಿಗೆ ಪೋಷಕರು ಚಿಕಿತ್ಸೆ ನೀಡುತ್ತಿದ್ದರು ಎನ್ನಲಾಗಿದೆ. ಮಗು ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಪೋಷಕರು ಅಸ್ವಸ್ತ ರಾಗಿದ್ದು, ಮಗುವಿನ ಮನೆಗೆ ಸಿಆರ್ಪಿಒ ಕುಮಾರ್ ಮತ್ತು ಶಾಲಾ ಶಿಕ್ಷಕರು ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿದರು.
ಶಿಕ್ಷಣ ಇಲಾಖಾ ನಿಯಮಾನುಸಾರ ಶಾಲಾ ವಿದ್ಯಾರ್ಥಿ ಕಲ್ಯಾಣ ನಿಧಿ ವತಿಯಿಂದ ಮಗುವಿನ ಕುಟುಂಬಕ್ಕೆ ಪರಿಹಾರವನ್ನು ಕಲ್ಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್. ಸಿ ಅವರು ಈಟಿವಿ ಭಾರತಕ್ಕೆ ಹೇಳಿದ್ದಾರೆ.