ಉಳ್ಳಾಲ(ದ.ಕ): ಜಿಲ್ಲಾ ಉಸ್ತುವಾರಿ ಸಚಿವರು ಎರಡು ಬಾರಿ ಸೋಮೇಶ್ವರ-ಉಚ್ಚಿಲ ಕಡಲ್ಕೊರೆತ ಪ್ರದೇಶಗಳಿಗೆ ಭೇಟಿ ನೀಡಿ ಅಪಾಯಕ್ಕೆ ಒಳಗಾದವರಿಗೆ ಸಾಂತ್ವನ ಹೇಳಿದ್ದಾರೆ. ಆದರೆ ಯು.ಟಿ.ಖಾದರ್ ಸೌಜನ್ಯಕ್ಕಾದರೂ ಆ ಪ್ರದೇಶಕ್ಕೆ ಭೇಟಿ ನೀಡದೆ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸುವುದನ್ನು ಮಾತ್ರ ಹವ್ಯಾಸವನ್ನಾಗಿ ಮಾಡಿಕೊಂಡಿದ್ದಾರೆ ಎಂದು ಮಂಗಳೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ ಹೇಳಿದರು.
ತೊಕ್ಕೊಟ್ಟು ಕಾಪಿಕಾಡಿನ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಸ್ತುವಾರಿ ಸಚಿವರು ಪ್ರದೇಶಕ್ಕೆ ಭೇಟಿ ನೀಡಿದ ಬಳಿಕ ಜಿಲ್ಲಾಡಳಿತ, ಲೋಕೋಪಯೋಗಿ ಇಲಾಖೆ ಮತ್ತು ಬಂದರು ಇಲಾಖೆಯ ಅಧಿಕಾರಿಗಳ ಜತೆಗೆ ಚರ್ಚಿಸಿ ತುರ್ತು ಪರಿಹಾರಕ್ಕೆ ಸೂಚಿಸಿದ್ದಾರೆ. ಕಳೆದ 25 ವರ್ಷಗಳಿಂದ ಮಂಗಳೂರು ಕ್ಷೇತ್ರವನ್ನು ಆಳುತ್ತಿರುವ ಯು.ಟಿ.ಖಾದರ್ ಸುಳ್ಳು ಭರವಸೆಗಳನ್ನು ನೀಡುತ್ತಿದ್ದಾರೆ. ಮಾರಕ ಕೊರೊನಾ ಲಾಕ್ಡೌನ್ ನಡುವೆಯೂ ಮಾಸ್ಕ್ ಧರಿಸದೆ, ಅಂತರ ಕಾಪಾಡದೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಜನರನ್ನು ತಪ್ಪು ದಾರಿಗೆ ಕೊಂಡೊಯ್ಯುವ ಪ್ರಯತ್ನ ಮಾಡಿದ್ದಾರೆ ಎಂದು ಆರೋಪಿಸಿದರು.
ಇವರಿಗೆ ಪ್ರಧಾನಿ ಮತ್ತು ಜಿಲ್ಲೆಯ ಸಂಸದರ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ಕಡಲ್ಕೊರೆತಕ್ಕೆ 15 ವರ್ಷಗಳಿಂದ ಶಾಶ್ವತ ಯೋಜನೆ ನಡೆಸುತ್ತಿರುವುದಾಗಿ ಪ್ರಚಾರ ಪಡೆದುಕೊಳ್ಳುತ್ತಿರುವ ಶಾಸಕ ಯು.ಟಿ.ಖಾದರ್, ಈವರೆಗೂ ಪೂರ್ಣಗೊಳಿಸದೆ ಇರುವ ಹಿಂದೆ ಅವ್ಯವಹಾರ ನಡೆದಿರುವ ಸಾಧ್ಯತೆಗಳಿವೆ. ಕ್ಷೇತ್ರದ ಸಮಸ್ಯೆಗಳು ನೂರಾರು ಇದ್ದರೂ ಬೆಂಗಾವಲು ವಾಹನದೊಂದಿಗೆ ತಾವೇ ಜಿಲ್ಲೆಗೆ ಸಚಿವರು ಎಂಬಂತೆ ವರ್ತಿಸಿ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಜಿಲ್ಲೆ ಹಾಗೂ ದೇಶದ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದ ಎಂದರು.