ಕುಕ್ಕೆ ಸುಬ್ರಹ್ಮಣ್ಯ (ದಕ್ಷಿಣ ಕನ್ನಡ): ವಿಶ್ವಪ್ರಸಿದ್ಧ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಚೌತಿಯ ದಿನವಾದ ಶನಿವಾರದಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರು ಎಡೆಸ್ನಾನ ಸೇವೆ ನೆರವೇರಿಸಿದರು.
ಗೋವುಗಳು ಸೇವಿಸಿದ ನೈವೇದ್ಯದ ಎಲೆಯ ಮೇಲೆ ಭಕ್ತರು ಉರುಳು ಸೇವೆ ನಡೆಸುವ ಮೂಲಕ ಚಂಪಾಷಷ್ಠಿಯ ಜಾತ್ರೋತ್ಸವದ ಚೌತಿಯ ದಿನದಂದು ಎಡೆಸ್ನಾನ ಹರಕೆ ಸೇವೆ ಸಲ್ಲಿಸಿದರು. ಸುಮಾರು 95 ಭಕ್ತರು ಸ್ವಯಂಪ್ರೇರಿತರಾಗಿ ಸೇವೆ ನೆರವೇರಿಸಿದರು. ಪಂಚಮಿ ಮತ್ತು ಷಷ್ಠಿಯಂದು ಭಕ್ತರು ಎಡೆಸ್ನಾನ ಸೇವೆ ನೆರವೇರಿಸಲಿದ್ದಾರೆ.
ಧಾರ್ಮಿಕ ದತ್ತಿ ಇಲಾಖೆಯ ಶೈವಾಗಮ ಪಂಡಿತರ ಮಾರ್ಗದರ್ಶನದಂತೆ ಶ್ರೀ ದೇವರ ಮಧ್ಯಾಹ್ನದ ಮಹಾಪೂಜೆ ಬಳಿಕ ದೇವಳದ ಹೊರಾಂಗಣದ ಸುತ್ತಲೂ 432 ಬಾಳೆ ಎಲೆಗಳನ್ನು ಹಾಕಿ ಅದರ ಮೇಲೆ ದೇವರ ನೈವೇದ್ಯಗಳನ್ನು ಬಡಿಸಲಾಯಿತು. ಬಳಿಕ ದೇವಳದ ಗೋವುಗಳು ಆ ಎಲೆಗಳಲ್ಲಿದ್ದ ಅನ್ನಪ್ರಸಾದವನ್ನು ತಿಂದವು. ಹಸುಗಳು ತಿಂದ ಅನ್ನಪ್ರಸಾದದ ಮೇಲೆ ದೇವಳದ ಎದುರಿನ ದರ್ಪಣತೀರ್ಥ ನದಿಯಲ್ಲಿ ಸ್ನಾನ ಮಾಡಿ ಬಂದು ನಿಂತಿದ್ದ ಎಲ್ಲಾ ವಯೋಮಾನದ ಭಕ್ತರು ಉರುಳು ಸೇವೆ ಕೈಗೊಂಡರು.
ಗೋವು ತಿಂದ ಎಲೆಯ ಮೇಲೆ ಉರುಳು ಸೇವೆ ಮಾಡುತ್ತಾ ಒಂದು ಸುತ್ತು ಪ್ರದಕ್ಷಿಣೆ ಹಾಕಿದ ಬಳಿಕ ಭಕ್ತರು ದರ್ಪಣ ತೀರ್ಥ ನದಿಯಲ್ಲಿ ಸ್ನಾನ ಮಾಡಿ ಶ್ರೀ ದೇವರ ಪ್ರಸಾದ ಮತ್ತು ಪ್ರಸಾದ ಭೋಜನವನ್ನು ಸ್ವೀಕರಿಸಿದರು. ತನ್ನ ಒಳಿತಿಗಾಗಿ ಹಿರಿಯರು ಹೇಳಿದ ಹರಕೆಯಂತೆ ಪುಟ್ಟ ಬಾಲಕಿಯೋರ್ವಳು ಎಡೆಸ್ನಾನ ಹರಕೆಯನ್ನು ನೆರವೇರಿಸಿದಳು.
ಈ ಸಂದರ್ಭದಲ್ಲಿ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ, ಕಾರ್ಯನಿರ್ವಹಣಾಧಿಕಾರಿ ಡಾ. ನಿಂಗಯ್ಯ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವನಜಾ. ವಿ. ಭಟ್, ಶ್ರೀವತ್ಸ ಬೆಂಗಳೂರು, ಮನೋಹರ ರೈ, ಪಿಜಿಎಸ್‌ಎನ್ ಪ್ರಸಾದ್, ಶೋಭಾ ಗಿರಿಧರ್, ಶ್ರೀ ದೇವಳದ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್, ಹೆಬ್ಬಾರ್ ಪ್ರಸನ್ನ ಭಟ್ ಮತ್ತಿತರರು ಉಪಸ್ಥಿತರಿದ್ದರು.
ಇಂದು ಪಂಚಮಿ ರಥೋತ್ಸವ, ನಾಳೆ ಮಹಾರಥೋತ್ಸವ: ಇಂದು ಶ್ರೀ ಕ್ಷೇತ್ರದಲ್ಲಿ ಅಂದರೆ ಡಿ.17 ರಂದು ಚಂಪಾಷಷ್ಠಿ ಪಂಚಮಿ ದಿನದಂದು ರಾತ್ರಿ ಪಂಚಮಿ ರಥೋತ್ಸವ ಜರುಗಲಿದೆ. ಶ್ರೀದೇವರಿಗೆ ಮಹಾಪೂಜೆ, ಉತ್ಸವ, ತೈಲಾಭ್ಯಂಜನ ಜರುಗಲಿದೆ. ನಾಳೆ (ಡಿ.18) ರಂದು ಪ್ರಾತಃಕಾಲದಲ್ಲಿ ಚಂಪಾಷಷ್ಠಿ ಮಹಾರಥೋತ್ಸವ ಜರುಗಲಿದೆ. ಈ ವರ್ಷ ಸರ್ಕಾರದ ವತಿಯಿಂದ ಮಹಿಳೆಯರಿಗೆ ಉಚಿತ ಬಸ್ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ.
ಇದನ್ನೂ ಓದಿ: ಕುಕ್ಕೆಯಲ್ಲಿ ಚಂಪಾಷಷ್ಠಿ ಜಾತ್ರಾ ಮಹೋತ್ಸವ : ಭಕ್ತರಿಗೆ ಮೂಲ ಮೃತ್ತಿಕೆ ಪ್ರಸಾದ ವಿತರಣೆ