ಮಂಗಳೂರು: ಉತ್ತರ ಪ್ರದೇಶದ ಹಥ್ರಾಸ್ನಲ್ಲಿ ದಲಿತ ಯುವತಿಯ ಅತ್ಯಾಚಾರ ಹಾಗೂ ಹತ್ಯೆ ಖಂಡಿಸಿ ಸಿಎಫ್ಐ (ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ) ಮಹಿಳಾ ಸದಸ್ಯೆಯರಿಂದ ನಗರದ ಕ್ಲಾಕ್ ಟವರ್ ಮುಂಭಾಗ ಪ್ರತಿಭಟನೆ ನಡೆಯಿತು. ಈ ಸಂದರ್ಭ ಪ್ರತಿಭಟನಾಕಾರರು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಹಾಗೂ ಕೇಂದ್ರದ ಮೋದಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಷ್ಟ್ರೀಯ ಸಮಿತಿ ಸದಸ್ಯೆ ಮಿಸ್ರಿಯಾ ಮಾತನಾಡಿ, ಮಧ್ಯರಾತ್ರಿ ಹೆಣ್ಣೊಬ್ಬಳು ಯಾವುದೇ ಭಯವಿಲ್ಲದೇ ನಿರಾತಂಕವಾಗಿ ರಸ್ತೆಯಲ್ಲಿ ನಡೆದು ಹೋಗುತ್ತಾಳೋ ಅಂದಿಗೆ ಭಾರತಕ್ಕೆ ನಿಜವಾಗಿಯೂ ಸ್ವಾತಂತ್ರ್ಯ ಲಭಿಸುತ್ತದೆ. ಇದು ಗಾಂಧೀಜಿಯವರ ನಿಲುವಾಗಿತ್ತು. ಆದರೆ, ಇಂದು ಮಹಿಳೆಯರು ಹಾಡಹಗಲೇ ರಸ್ತೆಯಲ್ಲಿ ನಡೆಯಲು ಹೆದರುವ ಪರಿಸ್ಥಿತಿ ಉಂಟಾಗುತ್ತಿದೆ. ರಾಷ್ಟ್ರೀಯ ಅಪರಾಧ ಪತ್ತೆದಳದ ದಾಖಲೆಗಳ ಪ್ರಕಾರ ಉತ್ತರ ಪ್ರದೇಶ ರಾಷ್ಟ್ರದಲ್ಲೇ ಮಹಿಳೆಯರು ಅತೀ ಹೆಚ್ಚು ಹಿಂಸೆಗೊಳಗಾಗುವ ರಾಜ್ಯ ಎಂದು ತಿಳಿದು ಬರುತ್ತದೆ. ಉತ್ತರ ಪ್ರದೇಶ ಮಹಿಳೆಯರಿಗೆ ಸುರಕ್ಷಿತವಾದ ತಾಣವಲ್ಲ ಎಂದು ಸಿಎಫ್ಐ ಆಗ್ರಹಿಸುತ್ತದೆ ಎಂದು ಹೇಳಿದರು.
ಬಂಟ್ವಾಳದಲ್ಲಿ ಪ್ರತಿಭಟನೆ:
ಉತ್ತರ ಪ್ರದೇಶದಲ್ಲಿ ದಲಿತ ಯುವತಿ ದೌರ್ಜನ್ಯ ಖಂಡಿಸಿ ಭಾರತೀಯ ಮಹಿಳಾ ಒಕ್ಕೂಟ ಹಾಗೂ ಅಖಿಲ ಭಾರತ ಯುವಜನ ಫೆಡರೇಷನ್ ಆಶ್ರಯದಲ್ಲಿ ಶುಕ್ರವಾರ ಬಿಸಿರೋಡಿನ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಭಾರತೀಯ ಮಹಿಳಾ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಭಾರತಿ ಪ್ರಶಾಂತ್. ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬರುವ ಸಂದರ್ಭದಲ್ಲಿ ಪ್ರತಿ ಹೆಣ್ಣು ಮಗಳ ರಕ್ಷಣೆ ಮತ್ತು ಶಿಕ್ಷಣ ಪಡೆಯುವಂತಾಗಬೇಕು ಎಂಬ ಇರಾದೆಯೊಂದಿಗೆ ಬೇಟಿ ಬಚಾವೋ, ಬೇಟಿ ಪಡಾವೋ ಎಂಬ ಘೋಷಣೆ ನೀಡಿತ್ತು.
ಆದರೆ, ಅಧಿಕಾರ ಚುಕ್ಕಾಣಿ ಹಿಡಿದು 6 ವರ್ಷ ಕಳೆದಿದೆ. ಅದರೆ ಸರಕಾರದ ಘೋಷಣೆ ಈಡೇರುವ ಬದಲಾಗಿ ಹೆಣ್ಣು ಮಕ್ಕಳು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ ಎಂಬ ಆತಂಕ ವ್ಯಕ್ತಪಡಿಸಿದರು.