ಬೆಳ್ತಂಗಡಿ(ದಕ್ಷಿಣಕನ್ನಡ): ಭೂಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ, ಕಾರ್ಮಿಕ ಕಾಯ್ದೆ, ಅಗತ್ಯ ಸರಕುಗಳ ಕಾಯ್ದೆಗಳ ತಿದ್ದುಪಡಿ, ವಿದ್ಯುತ್ ಖಾಸಗೀಕರಣ ಹಾಗೂ ಮೇಲ್ಜಾತಿಯವರಿಗೆ ಶೇ.10 ಮೀಸಲಾತಿ ಜಾರಿಗೆ ತರಲಾಗುತ್ತಿದೆ. ಇದರ ಜಾಗೃತಿಗಾಗಿ ರೈತ, ದಲಿತ, ಕಾರ್ಮಿಕ, ಜನಪರ ಚಳವಳಿಗಳ ಒಕ್ಕೂಟ ದ.ಕ ಇದರ ವತಿಯಿಂದ ಸೆ.11ರಂದು ವಿಚಾರಗೋಷ್ಠಿ ಮತ್ತು ಸಂವಾದ ಕಾರ್ಯಕ್ರಮ ಜೊತೆಗೆ ಅಧಿವೇಶನ ಸಮಯದಲ್ಲಿ ಮೌನ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಈ ಸಂದರ್ಭ ಮೌನ ಪ್ರತಿಭಟನೆ ಮಾಡುವುದರ ಜೊತೆಗೆ ಉಭಯ ಜಿಲ್ಲೆಗಳ ಎಲ್ಲಾ ತಾಲೂಕುಗಳಲ್ಲಿ ಪಾದಯಾತ್ರೆ ನಡೆಸಲು ಉದ್ದೇಶಿಸಲಾಗಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಓಸ್ವಲ್ಡ್ ಪ್ರಕಾಶ್ ಫೆರ್ನಾಂಡೀಸ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.11ರಂದು ಬಿಸಿರೋಡ್ ಹೋಟೆಲ್ ರಂಗೋಲಿ ಸಭಾಭವನದಲ್ಲಿ ಜಿಲ್ಲಾ ಮಟ್ಟದ ವಿಚಾರಗೋಷ್ಠಿ ಮತ್ತು ಸಂವಾದ ನಡೆಸಿ ಕಾಯ್ದೆಗಳ ತಿದ್ದುಪಡಿಯ ಸಾಧಕ-ಬಾಧಕಗಳ ಬಗ್ಗೆ ಜಾಗೃತಿ ಮೂಡಿಸಲಾಗುವುದು. ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಭೂಸುಧಾರಣಾ ಕಾಯ್ದೆ ಬಗ್ಗೆ ವಿಷಯ ಮಂಡಿಸಲಿದ್ದಾರೆ. ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಾರುತಿ ಮಾನ್ಪಡೆ, ಎಪಿಎಂಸಿ ಕಾಯ್ದೆ ಮತ್ತು ಕಾರ್ಮಿಕ ಕಾಯ್ದೆಯ ತಿದ್ದುಪಡಿಯ ಬಗ್ಗೆ ವಿಷಯ ಮಂಡಿಸಲಿದ್ದಾರೆ.
ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ರವಿಕಿರಣ್ ಪುಣಚ್ಚ ಪ್ರಾಸ್ತಾವಿಕವಾಗಿ ಮಾತನಾಡಲಿದ್ದು, ಖ್ಯಾತ ಸಮಾಜ ಚಿಂತಕ ಶಿವಸುಂದರ್ ಕಾರ್ಯಕ್ರಮ ಉದ್ಘಾಟಿಸಿ ಅಗತ್ಯ ಸರಕುಗಳ ಕಾಯ್ದೆ, ಬೀಜ ಕಾಯ್ದೆ ತಿದ್ದುಪಡಿ, ವಿದ್ಯುತ್ ಖಾಸಗೀಕರಣ, ಮೇಲ್ಜಾತಿಯವರಿಗೆ ಶೇ.10ರಂತೆ ಮೀಸಲಾತಿ ವಿಷಯದ ಬಗ್ಗೆ ವಿಷಯ ಮಂಡಿಸಲಿದ್ದಾರೆ ಎಂದರು.
ಈ ವಿಷಯಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಅಧಿವೇಶನ ಸಂದರ್ಭ ಮೌನ ಪ್ರತಿಭಟನೆ ಮಾಡಿ ಶಾಸಕರುಗಳಿಗೆ, ಸಚಿವರುಗಳಿಗೆ ಮನವಿ ನೀಡಲಾಗುವುದು. ಅಲ್ಲದೆ ಇಂತಹ ಕಾಯ್ದೆಗಳಿಂದ ಕರಾವಳಿ ಜಿಲ್ಲೆಗಳಿಗೆ ಹೆಚ್ಚು ಅನ್ಯಾಯವಾಗುತ್ತಿದೆ. ಇದಕ್ಕಾಗಿ ಅಕ್ಟೋಬರ್ ಅಥವಾ ನವೆಂಬರ್ ತಿಂಗಳಲ್ಲಿ ಸಂಪಾಜೆಯಿಂದ ಮಂಗಳೂರು ತನಕ, ಬೆಳ್ತಂಗಡಿ, ಬಂಟ್ವಾಳ, ಮೂಡುಬಿದಿರೆ ಇನ್ನಿತರ ತಾಲೂಕುಗಳಲ್ಲಿಯೂ ಪಾದಯಾತ್ರೆ ಮಾಡುವ ಮೂಲಕ ಜನರನ್ನು ಜಾಗೃತಿಗೊಳಿಸಲಾಗುತ್ತದೆ ಎಂದರು.
ಸಿಐಟಿಯು ತಾಲೂಕು ಸಂಚಾಲಕ ಶೇಖರ್ ಎಲ್. ಮಾತನಾಡಿ, ಯಾವುದೇ ಕಾಯ್ದೆಗಳನ್ನು ತಿದ್ದುಪಡಿ ಮಾಡಲು ಸಂವಿಧಾನದ ಪ್ರಕಾರ ಅಧಿವೇಶನದಲ್ಲಿ ಚರ್ಚಿಸಿ ಜಾರಿಗೊಳಿಸಬೇಕು. ಇದೀಗ ಕೇಂದ್ರ ಸರ್ಕಾರ ಲಾಕ್‌ಡೌನ್ ನಡುವೆ ಜನರನ್ನು ಕತ್ತಲೆಯಲ್ಲಿಟ್ಟು ಸುಗ್ರೀವಾಜ್ಞೆ ಮಾಡುವ ಮೂಲಕ ಸರ್ವಾಧಿಕಾರಿ ಧೋರಣೆ ಅನುಸರಿಸಿದೆ. ಹಿಂದೆ ಭೂಸುಧಾರಣೆ ಜಾರಿಗೊಳಿಸುವ ಮೂಲಕ ದಲಿತರಿಂದ ಹಿಡಿದ ಜನಸಾಮಾನ್ಯರು ಕೂಡ ಭೂ ಮಾಲೀಕರಾಗುವ ಅವಕಾಶ ಬಂದಿತ್ತು.
ಇದೀಗ ಭೂಸುಧಾರಣಾ ಕಾಯ್ದೆ ಜಾರಿಗೊಳಿಸಿ ಮತ್ತೆ ಗುಲಾಮಗಿರಿ ಪದ್ಧತಿ ಜಾರಿಗೊಳಿಸಲು ಸರ್ಕಾರ ಮುಂದಾಗಿದೆ. ಇದರ ವಿರುದ್ಧ ರೈತ, ದಲಿತ, ಕಾರ್ಮಿಕ, ಜನಪರ ಚಳವಳಿಗಳ ಒಕ್ಕೂಟ ದ. ಕ ಜಿಲ್ಲೆ ಹೋರಾಟ ಮಾಡಲು ಮುಂದಾಗಿದ್ದು, ಇದಕ್ಕೆ ಪ್ರತಿಪಕ್ಷಗಳು ಕೈಜೋಡಿಸಿ ಜನಸಾಮಾನ್ಯರಿಗೆ ನ್ಯಾಯ ಒದಗಿಸಲು ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ಹಸಿರು ಸೇನೆಯ ತಾಲೂಕು ಅಧ್ಯಕ್ಷ ಸುಧಾಕರ್ ಜೈನ್, ಕಾರ್ಯದರ್ಶಿ ಕೆ ಎಂ ರಮ್ಲಾ ಕಜೆಕೊಡಂಗೆ, ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ತಾಲೂಕು ಅಧ್ಯಕ್ಷ ಕೆ ನೇಮಿರಾಜ ಕಿಲ್ಲೂರು, ಸಿಐಟಿಯು ತಾಲೂಕು ಪ್ರಧಾನ ಕಾರ್ಯದರ್ಶಿ ವಸಂತ ನಡ ಉಪಸ್ಥಿತರಿದ್ದರು.