ಮಂಗಳೂರು (ದಕ್ಷಿಣ ಕನ್ನಡ) : ಕಾಫಿ ಡೇ ಮಾಲೀಕ ಸಿದ್ದಾರ್ಥ್ ಸೇರಿ ಅನೇಕರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಸೂಸೈಟ್ ಸ್ಟಾಟ್ ಎಂದೇ ಕುಖ್ಯಾತಿಗೊಳಗಾಗಿದ್ದ ಮಂಗಳೂರು-ಕೇರಳ ರಾಷ್ಟ್ರೀಯ ಹೆದ್ದಾರಿಯ ನೇತ್ರಾವತಿ ಸೇತುವೆಗೆ ತಡೆ ಬೇಲಿ ಮತ್ತು ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ.
ನೇತ್ರಾವತಿ ಸೇತುವೆಯಿಂದ ಈವರೆಗೆ 20 ಮಂದಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆ ಪೈಕಿ 16 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ನಾಲ್ವರನ್ನು ರಕ್ಷಿಸಿಸಲಾಗಿದೆ. ಹೀಗಾಗಿ, ಶಾಸಕ ವೇದವ್ಯಾಸ್ ಕಾಮತ್ ಅವರು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಮೂಲಕ ಅಹಿತಕರ ಘಟನೆಗಳಿಗೆ ಕಡಿವಾಣ ಹಾಕಲು ವಿವಿಧ ಕ್ರಮಗಳನ್ನು ಕೈಗೊಂಡಿದ್ದಾರೆ.
ಸುಮಾರು 800 ಮೀ. ಉದ್ದದ ಸೇತುವೆಯಿಂದ ಯಾರೂ ನದಿಗೆ ಹಾರದಂತೆ ತಡೆಯಲು ಸೇತುವೆಯ ನಾಲ್ಕೂ ಕಡೆಗಳಲ್ಲಿ ಕಬ್ಬಿಣದ ತಡೆಬೇಲಿ ಅಳವಡಿಸಲಾಗಿದೆ. ಅಲ್ಲದೆ, ಐದು ಲಕ್ಷ ರೂ. ವೆಚ್ಚದಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ.
ಓದಿ : ಫೇಮಸ್ ‘ಎಡಕಲ್ಲು ಗುಡ್ಡ’ ಗೊತ್ತಿಲ್ವೇ.. ಒಂದು ದಿನದ ಚಾರಣಕ್ಕೆ ಈ ಗವಿಬೆಟ್ಟ ಎಲ್ಲರ ನೆಚ್ಚಿನ ತಾಣ..
ಸೇತುವೆಯ ತಡೆಗೋಡೆಯ ಮೇಲೆ ಅಳವಡಿಕೆ ಮಾಡಿರುವ ತಡೆ ಬೇಲಿಯು ಐದು ಅಡಿ ಎತ್ತರವಿದೆ. ಅದರ ಮೇಲ್ಗಡೆ ಒಂದು ಅಡಿ ಎತ್ತರಕ್ಕೆ ಕಬ್ಬಿಣದ ಮುಳ್ಳು ಬೇಲಿ ಅಳವಡಿಸಲಾಗಿದೆ. ಈ ತಡೆಬೇಲಿಗೆ ಸುಮಾರು 55 ಲಕ್ಷ ರೂ. ವೆಚ್ಚ ತಗುಲಿದೆ.
ತಡೆಬೇಲಿ ಜೊತೆಗೆ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈ ಕ್ಯಾಮೆರಾಗಳು 500 ಮೀ. ದೂರದವರೆಗೂ ಸ್ಪಷ್ಟ ವಿಡಿಯೋ ಚಿತ್ರೀಕರಿಸುವ ಸಾಮರ್ಥ್ಯ ಹೊಂದಿದೆ. ಈ ಕ್ಯಾಮೆರಾಗಳು ವೈರ್ಲೆಸ್ ಆಗಿದ್ದು, ಇದರ ನೇರ ದೃಶ್ಯ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗುತ್ತದೆ.
ಕ್ಯಾಮೆರಾ ಅಳವಡಿಸಿರುವುದರಿಂದ ಆತ್ಮಹತ್ಯೆ ಮಾಡುವವರು ಮಾತ್ರವಲ್ಲ, ಸೇತುವೆ ಮೇಲಿನಿಂದ ನದಿಗೆ ಕಸ ಹಾಕುವವರ ಮೇಲೂ ನಿಗಾ ಇಡಲು ಅನಕೂಲವಾಗಿದೆ.