ಮಂಗಳೂರು: ಆತ್ಮನಿರ್ಭರ ಭಾರತ ಯೋಜನೆಯಡಿಯಲ್ಲಿ ಮಂಗಳೂರು ಬಂದರು ಅಭಿವೃದ್ಧಿಗೆ 5 ಸಾವಿರ ಕೋಟಿ ರೂ. ಮೀಸಲಿರಿಸಲಾಗಿದೆ. ತಲಪಾಡಿಯಿಂದ ಕುಂದಾಪುರದವರೆಗೆ ಸಮುದ್ರ ಪಥದಲ್ಲಿ ಪ್ರತ್ಯೇಕವಾಗಿ ಮೀನುಗಾರಿಕೆಗೆ ಸಂಬಂಧಿಸಿದ ರಸ್ತೆ ನಿರ್ಮಾಣವನ್ನು ಈ ಯೋಜನೆಯಡಿ ಜೋಡಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ನಗರದ ಬೇಂಗ್ರೆಯಲ್ಲಿ 65 ಕೋಟಿ ರೂ. ವೆಚ್ಚದಲ್ಲಿ ಕೋಸ್ಟಲ್ ಬರ್ತ್ ಹಾಗೂ 29 ಕೋಟಿ ರೂ. ವೆಚ್ಚದಲ್ಲಿ ಕ್ಯಾಪಿಟಲ್ ಡ್ರೆಜ್ಜಿಂಗ್ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಆತ್ಮನಿರ್ಭರ ಭಾರತದಡಿ ಕರಾವಳಿ ಭಾಗವನ್ನು ಪರಿವರ್ತನೆ ಮಾಡುವಂತಹ ಅದ್ಭುತವಾದ ಯೋಜನೆಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಕೊಚ್ಚಿಯಲ್ಲಿ ಕೋಸ್ಟ್ ಗಾರ್ಡ್ ತರಬೇತಿ ಕೇಂದ್ರವನ್ನು ನಿರ್ಮಿಸಬೇಕೆಂಬ ಬೇಡಿಕೆ ಅಲ್ಲಿನ ಸಮಸ್ಯೆಗಳಿಂದ ಸಾಧ್ಯವಾಗದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಮಾಡಬಹುದೆಂದು ನಾವು ಕೇಳಿದ್ದೆವು. ಇದಕ್ಕಾಗಿ ಅಂದಿನ ರಕ್ಷಣಾ ಮಂತ್ರಿ ನಿರ್ಮಲಾ ಸೀತಾರಾಮನ್ ಮರವೂರಿನಲ್ಲಿ ಜಾಗ ಪರಿಶೀಲನೆ ಮಾಡಿದ್ದರು. ಇದೀಗ ಯಡಿಯೂರಪ್ಪ ನೇತೃತ್ವದ ಸರಕಾರ ಜಾಗ ನೀಡಿದೆ. ಇದೀಗ ಒಂದು ಸಾವಿರ ಕೋಟಿ ರೂ. ಬಿಡುಗಡೆ ಆಗಿದೆ. ಕೆಲವೇ ತಿಂಗಳಲ್ಲಿ ಅದರ ಶಿಲಾನ್ಯಾಸ ನೆರವೇರಲಿದೆ. ಈ ಮೂಲಕ ದೇಶದಲ್ಲಿಯೇ ಮೊದಲ ಹಾಗೂ ಅತೀ ದೊಡ್ಡ ಕೋಸ್ಟ್ ಗಾರ್ಡ್ ತರಬೇತಿ ಕೇಂದ್ರ ಮಂಗಳೂರಿಗೆ ಆಗಮಿಸಲಿದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.
ಕರಾವಳಿಗೆ ಸಾಗರ ಮಾಲಾ ಯೋಜನೆಯ ಮೂಲಕ ಅತೀ ಹೆಚ್ಚು ಅನುದಾನಗಳನ್ನು ಬಿಡುಗಡೆ ಮಾಡುವ ಪ್ರಯತ್ನ ನಡೆಯುತ್ತಿದೆ. ಈ ವಾಣಿಜ್ಯ ಧಕ್ಕೆಗೆ ಕೇಂದ್ರ ಸರಕಾರ 25 ಕೋಟಿ ರೂ. ಬಿಡುಗಡೆ ಮಾಡಿದರೆ, ರಾಜ್ಯ ಸರಕಾರ 40 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. 1974-75ರಲ್ಲಿ ಪಣಂಬೂರು ಬಂದರು ಉದ್ಘಾಟನೆಗೆ ಬಂದಿದ್ದ, ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ಮಂಗಳೂರಿಗೆ ಮೀನುಗಾರಿಕಾ ಜಟ್ಟಿಯ ಅವಶ್ಯಕತೆ ಇದೆ ಎಂಬ ಉಲ್ಲೇಖ ಮಾಡಿದ್ದರು. ಆದರೆ ಅದು ಈಡೇರಿದ್ದು ನರೇಂದ್ರ ಮೋದಿ ಸರಕಾರದ ಕಾಲಘಟ್ಟದಲ್ಲಿ. ಎರಡು ವರ್ಷಗಳ ಹಿಂದೆ 250 ಕೋಟಿ ರೂ. ವೆಚ್ಚದಲ್ಲಿ ಕುಳಾಯಿ ಮೀನುಗಾರಿಕಾ ಜೆಟ್ಟಿ ನಿರ್ಮಾಣ ಮಾಡಲಾಗಿದೆ. ಈಗಾಗಲೇ ಟೆಂಡರ್ ಹಂತ ಮುಗಿದಿದೆ. ಫೆಬ್ರವರಿಯಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದರು.
ಓದಿ :ಇಂದು ವಿಶೇಷ ಪರಿಷತ್ ಕಲಾಪ: ಸಭಾಪತಿ ಮೇಲಿನ ಅವಿಶ್ವಾಸ ನಿರ್ಣಯ ಪ್ರಸ್ತಾಪ ಇಲ್ಲ
ಅಭಿವೃದ್ಧಿ ಕಾರ್ಯಗಳಾಗುವ ಸಂದರ್ಭದಲ್ಲಿ ಸಾರ್ವಜನಿಕರ ಸಹಭಾಗಿತ್ವ ಅಗತ್ಯ. ಇದೀಗ ಶಿಲಾನ್ಯಾಸ ನೆರವೇರಿಸಲಾಗಿರುವ ಜೆಟ್ಟಿಯನ್ನು ಬೇರಡೆ ಕೊಂಡೊಯ್ಯಬೇಕೆಂಬ ಒತ್ತಡವಿತ್ತು. ಈ ಪ್ರದೇಶ ಅಭಿವೃದ್ಧಿ ಆಗಬೇಕು, ಇಲ್ಲಿನ ಮೀನುಗಾರರಿಗೆ ಅನುಕೂಲ ಆಗಬೇಕೆನ್ನುವ ದೃಷ್ಟಿಯಿಂದ ನಾವು ಇಲ್ಲಿಯೇ ಜೆಟ್ಟಿ ನಿರ್ಮಾಣ ಕಾರ್ಯವನ್ನು ಮಾಡುತ್ತಿದ್ದೇವೆ. ಆದ್ದರಿಂದ ಇಲ್ಲಿನ ಸ್ಥಳೀಯರಿಗೆ ಯಾವುದೇ ರೀತಿಯಲ್ಲಿ ತೊಂದರೆ, ಅನ್ಯಾಯಗಳಾಗದಂತೆ ಈ ಜೆಟ್ಟಿಯನ್ನು ನಿರ್ಮಾಣ ಮಾಡಲಾಗುತ್ತದೆ ಎಂದು ಸಾರ್ವಜನಿಕರಿಗೆ ಅಭಯ ನೀಡಿದರು.