ಮಂಗಳೂರು: ತಲಪಾಡಿ ಟೋಲ್ ಗೇಟ್ನಲ್ಲಿ ಖಾಸಗಿ ಸಿಟಿ ಬಸ್ ಮಾಲೀಕರಿಗೆ ವಿಧಿಸಿರುವ ಶುಲ್ಕದ ಪರಿಣಾಮ ಸಿಟಿ ಬಸ್ ಟೋಲ್ ದಾಟದೆ ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದರು. ಇದೀಗ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಯಶಸ್ವಿಯಾಗಿ ಸಂಧಾನ ನಡೆಸಿ ಸಮಸ್ಯೆ ಬಗೆಹರಿಸಿದ್ದಾರೆ.
ಕದ್ರಿಯಲ್ಲಿರುವ ಮಹಾ ನಗರ ಪಾಲಿಕೆ ವಿಭಾಗೀಯ ಕಚೇರಿಯಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ನವಯುಗ ಸಂಸ್ಥೆ, ಸಿಟಿ ಬಸ್ ಮಾಲೀಕರ ಸಂಘ, ಸ್ಥಳೀಯರ ಸಮಕ್ಷಮದಲ್ಲಿ ಸಂಧಾನ ಸಭೆ ನಡೆದಿತ್ತು. ಇದರಲ್ಲಿ ಸಿಟಿ ಬಸ್ಗಳು ಟೋಲ್ ಕೇಂದ್ರಕ್ಕೆ ತಿಂಗಳಿಗೆ 14 ಸಾವಿರ ರೂ. ಶುಲ್ಕ ಪಾವತಿಸಿ ಅನಿಯಮಿತ ಪಾಸ್ ಪಡೆದು ಸುಗಮ ಸಂಚಾರಕ್ಕೆ ಒಪ್ಪಂದ ಮಾಡಿಕೊಂಡಿದ್ದಾರೆ.
ಈ ಹಿಂದೆ ತಲಪಾಡಿ ಟೋಲ್ ಗೇಟ್ನಲ್ಲಿ ದುಬಾರಿ ಶುಲ್ಕ ವಿಧಿಸುತ್ತಿದ್ದ ಹಿನ್ನೆಲೆಯಲ್ಲಿ ಖಾಸಗಿ ಸಿಟಿ ಬಸ್ ಮಾಲೀಕರು ಟೋಲ್ ಕೇಂದ್ರದಿಂದ ಆಚೆಗೆ ತೆರಳದೇ ಅರ್ಧದಲ್ಲಿಯೇ ಪ್ರಯಾಣಿಕರನ್ನು ಇಳಿಸುತ್ತಿದ್ದರು. ಇದರಿಂದ ಪ್ರಯಾಣಿಕರು ಸಂಕಷ್ಟಕ್ಕೊಳಗಾಗುತ್ತಿದ್ದು, ನಡೆದುಕೊಂಡು ಅಥವಾ ಟೋಲ್ ಕೇಂದ್ರ ದಾಟಿ ಬೇರೆ ಬಸ್ಗಳಲ್ಲಿ ಪ್ರಯಾಣಿಸಬೇಕಾಗುತ್ತಿತ್ತು. ಇದೀಗ ಸಂಧಾನ ಫಲಪ್ರದವಾಗಿ ಜನರ ತೊಂದರೆ ನೀಗಿದೆ. ಆದರೆ ಮಂಗಳೂರಿನಿಂದ ತಲಪಾಡಿಗೆ ಸಂಚರಿಸುವ ಬಸ್ ಪ್ರಯಾಣ ದರ 2ರೂ. ಏರಿಕೆಯಾಗಲಿದೆ. ಆದರೆ ತಲಪಾಡಿಯ ಸ್ಥಳೀಯ ವಾಹನ ಸವಾರರಿಗೆ ಟೋಲ್ ವಿನಾಯಿತಿ ಇರಲಿದೆ.