ಮಂಗಳೂರು: ನಗರದ ಪಂಪ್ವೆಲ್ನಲ್ಲಿ ವ್ಯಕ್ತಿಯೊಬ್ಬರಿಗೆ ಸಿಕ್ಕಿದ ಲಕ್ಷಾಂತರ ರೂ ಹಣದಲ್ಲಿ 3. 5 ಲಕ್ಷ ರೂ ಪೊಲೀಸರ ಕೈ ಸೇರಿದ್ದು, ಉಳಿದ ಹಣ ಎಲ್ಲಿ ಎಂಬುದು ಈಗ ಕುತೂಹಲ ಮೂಡಿಸಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈ ಪ್ರಕರಣದ ಬಗ್ಗೆ ಮಂಗಳೂರಿನಲ್ಲಿ ಮಾತನಾಡಿದ ನಗರ ಪೊಲೀಸ್ ಕಮೀಷನರ್ ಶಶಿಕುಮಾರ್, ಬಸ್ನಲ್ಲಿ ಕ್ಲೀನರ್ ಕೆಲಸ ಮಾಡುತ್ತಿರುವ ಶಿವರಾಜ್ ಎಂಬುವವರಿಗೆ ನವೆಂಬರ್ 26ರ ಬೆಳಗ್ಗೆ ಲಕ್ಷಾಂತರ ರೂಪಾಯಿ ಇದ್ದ ಹಣದ ಕಟ್ಟು ಪಂಪ್ ವೆಲ್ ಬಳಿ ದೊರೆತಿತ್ತು. ಇವರ ಜೊತೆಗೆ ತುಕಾರಾಮ್ ಎಂಬುವವರು ಇದನ್ನು ನೋಡಿದ್ದು, ಅವರು ಕೇಳಿದ್ದಕ್ಕೆ 50 ಸಾವಿರದ ಆರು ಬಂಡಲ್ಗಳನ್ನು ಕೊಟ್ಟಿದ್ದಾರೆ ಎನ್ನಲಾಗಿದೆ.
ಪೊಲೀಸರಿಂದ ತಪಾಸಣೆ: ಉಳಿದ ಹಣವನ್ನು ತನ್ನಲ್ಲಿ ಇಟ್ಟುಕೊಂಡಿದ್ದು, ಅದರಲ್ಲಿ ಒಂದು ಸಾವಿರ ತೆಗೆದು ಕುಡಿದು ರಸ್ತೆ ಬದಿ ಮಲಗಿದ್ದಾರೆ. ಇವರ ಬಳಿ ಅಪಾರ ಹಣ ಇದೆ ಎಂಬ ಮಾಹಿತಿ ಪಡೆದ ಪೊಲೀಸರು ಆತನಲ್ಲಿಗೆ ಬಂದು ತಪಾಸಣೆ ನಡೆಸಿದಾಗ 49,500 ರೂಪಾಯಿ ಸಿಕ್ಕಿದೆ ಎಂದು ತಿಳಿಸಿದ್ದರು ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.
ಹಣ ಮರಳಿಸಿದ ಕುಟುಂಬಸ್ಥರು: ನಂತರ 49.500 ಪಡೆದು ಸ್ಟೇಷನ್ ಡೈರಿಯಲ್ಲಿ ನಮೂದಿಸಲಾಗಿದೆ. ವಾರಸುದಾರರು ಬಂದ ಬಳಿಕ ಅದನ್ನು ನೀಡಲು ಇಡಲಾಗಿದೆ. ನಿನ್ನೆ ಮಾಧ್ಯಮಗಳಲ್ಲಿ ಹತ್ತು ಲಕ್ಷ ರೂ ಗಳವರೆಗೆ ಹಣ ಸಿಕ್ಕಿದೆ. ಅದರಲ್ಲಿ ಒಬ್ಬರು ಸ್ವಲ್ಪ ಹಣ ಕೊಂಡು ಹೋಗಿದ್ದಾರೆ ಎಂಬ ಸುದ್ದಿಗಳು ಬಂದ ಬಳಿಕ ತುಕರಾಮ್ ಎಂಬುವವರ ಪತ್ನಿ ಮತ್ತು ಮಗ ಮನೆಯಲ್ಲಿದ್ದ ಹಣವನ್ನು ಪೊಲೀಸರಿಗೆ ತಂದು ಕೊಟ್ಟಿದ್ದಾರೆ. ಅದರಲ್ಲಿ 2,99,500 ಇತ್ತು. ಶಿವರಾಜ್ ಮತ್ತು ತುಕರಾಮ್ ಅವರಿಂದ ಒಟ್ಟು 3,49,000 ರೂ. ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತರು ಪ್ರಕರಣದ ಸಂಪೂರ್ಣ ಮಾಹಿತಿ ನೀಡಿದರು.
ದಾಖಲೆ ನೀಡುವಂತೆ ಸೂಚನೆ: ಈ ಬಗ್ಗೆ ಸಿಸಿಟಿವಿ ದಾಖಲೆಗಳನ್ನು ಪರಿಶೀಲಿಸಲಾಗುವುದು. ಶಿವರಾಜ್ ಕುಡಿದು ಮಲಗಿದ್ದ ಸಂದರ್ಭದಲ್ಲಿ ಆತನಲ್ಲಿದ್ದ ಹಣವನ್ನು ಕಿತ್ತುಕೊಂಡು ಹೋಗಿದ್ದರೆ ಅಪರಾಧವಾಗುತ್ತದೆ. ಈ ರೀತಿ ಹಣ ಯಾರ ಬಳಿಯಾದರೂ ಇದ್ದರೆ ಪೊಲೀಸರಿಗೆ ತಲುಪಿಸುವಂತೆ ಅವರು ಸೂಚಿಸಿದ್ದಾರೆ. ಹಣದ ವಾರಸುದಾರರು ದಾಖಲೆಗಳನ್ನು ನೀಡುವಂತೆ ಇದೇ ವೇಳೆ ಪೊಲೀಸ್ ಆಯುಕ್ತ ಶಶಿಕುಮಾರ್ ಮನವಿ ಮಾಡಿದ್ದಾರೆ.
ಇನ್ನು ಮಾಧ್ಯಮಗಳಲ್ಲಿ ಬಂದ ಸುದ್ದಿಯನ್ನು ಗಮನಿಸಿ ಹಣ ವಾಪಸ್ ನೀಡಿದ ತುಕರಾಮ್ ಅವರ ಪತ್ನಿ ಪ್ರೇಮ ಮಾತನಾಡಿ, ನನ್ನ ಗಂಡ ಮೀನು ತರಲೆಂದು ಹೋದವರು ದೊಡ್ಡ ಹಣದ ಕಟ್ಟು ತಂದಿದ್ದರು. ಇದನ್ನು ನೋಡಿ ಗಾಬರಿಯಾಗಿತ್ತು. ಮಗನ ಮೊಬೈಲ್ನಲ್ಲಿ ನಿನ್ನೆ ಸುದ್ದಿಗಳನ್ನು ನೋಡಿದ ಬಳಿಕ ಇದನ್ನು ಪೊಲೀಸರಿಗೆ ನೀಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಓದಿ: ಬೀದಿ ಬದಿಯಲ್ಲಿ ಸಿಕ್ಕಿತು ಲಕ್ಷ ಗಟ್ಟಲೆ ಹಣ : ಅರ್ಧ ಗಂಟೆಯಲ್ಲಿ ಕೈತಪ್ಪಿದು ಹೀಗೆ...