ಉಳ್ಳಾಲ(ಮಂಗಳೂರು): ಕೊರೊನಾ ಪಾಸಿಟಿವ್‍ನಿಂದ ಎಲ್ಲರೂ ದೂರ ಹೋಗುತ್ತಿರುವ ಕಾಲಘಟ್ಟದಲ್ಲಿ ಟಿ.ಜಿ. ರಾಜಾರಾಮ್ ಭಟ್ ಅವರ ನೇತೃತ್ವದಲ್ಲಿ ಹಿಂದೂ ಸಂಘಟನೆಗಳ ಯುವಕರ ತಂಡವೊಂದು ಶ್ರಮದಾನದ ಮೂಲಕ ಆರ್ಥಿಕವಾಗಿ ಹಿಂದುಳಿದ ಕುಟುಂಬವೊಂದಕ್ಕೆ "ಆಸರೆ" ಯೋಜನೆಯಡಿ ಸುಂದರ ಮನೆ ನಿರ್ಮಿಸಿಕೊಟ್ಟಿದ್ದಾರೆ.
ಬಂಟ್ವಾಳ ತಾಲೂಕಿನ ನರಿಂಗಾನ ಗ್ರಾಮದ ಶೇಡಿಗುಂಡಿಯ ನಾರಾಯಣ ಪೂಜಾರಿ ಅವರಿಗೆ, ಕೈರಂಗಳ ಪುಣ್ಯಕೋಟಿನಗರದ ಶಾರದಾಗಣಪತಿ ವಿದ್ಯಾಕೇಂದ್ರದ ಸಂಚಾಲಕ ಟಿ.ಜಿ. ರಾಜಾರಾಮ್ ಭಟ್ ನೇತೃತ್ವದಲ್ಲಿ ದಾನಿಗಳು, ಸಂಘಟನೆಗಳು, ಸ್ವಯಂಸೇವಕರ ಸಹಕಾರದಲ್ಲಿ ನಿರ್ಮಿಸಲಾದ "ಆಸರೆ" ನೂತನ ಮನೆಯ ಕೀಲಿ ಕೈಯನ್ನು ನಾರಾಯಣ ಪೂಜಾರಿ ಕುಟುಂಬಕ್ಕೆ ಕಲ್ಲಡ್ಕ ಪ್ರಭಾಕರ ಭಟ್ ಹಸ್ತಾಂತರಿಸಿದರು. ಮನೆಯೊಳಗೆ ದೀಪ ಬೆಳಗಿಸಿದ ಬಳಿಕ ಅಂಗಳದಲ್ಲಿ ತುಳಸಿ ಗಿಡ ನೆಡಲಾಯಿತು.
ಆ ಬಳಿಕ ಮಾಧ್ಯಮದ ಜೊತೆಗೆ ಅವರು ಮಾತನಾಡಿದ ಭಟ್, ಇದು ಇಡೀ ಸಮಾಜಕ್ಕೆ ಪಾಸಿಟಿವ್ ಕಾರ್ಯವಾಗಿದೆ. ಯುವಕರ ತಂಡದ ಶ್ರಮದಾನದ ಮೂಲಕ ಧನಾತ್ಮಕ ಚಿಂತನೆಯೊಂದಿಗೆ ಆರ್ಥಿಕವಾಗಿ ಹಿಂದುಳಿದ ಕುಟುಂಬವೊಂದಕ್ಕೆ "ಆಸರೆ" ಯೋಜನೆಯಡಿ ಸುಂದರ ಮನೆ ನಿರ್ಮಿಸಿಕೊಟ್ಟಿದ್ದಾರೆ. ಈ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.
ಈ ಸಂದರ್ಭ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದಿರೆ, ದಿ ಮೈಸೂರ್ ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿ. ಬೆಂಗಳೂರಿನ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಬಿಜೆಪಿ ಮಂಗಳೂರು ಕ್ಷೇತ್ರ ಅಧ್ಯಕ್ಷ ಚಂದ್ರಹಾಸ್ ಪಂಡಿತ್‍ಹೌಸ್, ಸ್ಥಳದಾನಿ ದೋಸೆಮನೆ ಶಂಕರ ಭಟ್, ಹಿಂದೂ ಜಾಗರಣ ವೇದಿಕೆಯ ಪ್ರಮುಖರಾದ ನರಸಿಂಹ ಮಾಣಿ, ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಸಚಿನ್ ಮೋರೆ ಸೇರಿದಂತೆ ಹಿಂದೂ ಸಂಘಟನೆಯ ಪ್ರಮುಖರು, ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಇದೇ ಸಂದರ್ಭ ಮನೆ ನಿರ್ಮಾಣದಲ್ಲಿ ಉಚಿತ ಕಾಮಗಾರಿ ನಡೆಸಿಕೊಟ್ಟವರು, ಶ್ರಮದಾನಗೈದವರು ಮತ್ತು ದಾನಿಗಳನ್ನು ಗೌರವಿಸಲಾಯಿತು.
ಇದನ್ನೂ ಓದಿ: 'ಬೆಲ್ಲದ್ ದೆಹಲಿ ಯಾತ್ರೆ' ಕುರಿತು ಸಿಎಂಗೆ ಮಾಹಿತಿ ನೀಡಿದ ಬೊಮ್ಮಾಯಿ