ಮಂಗಳೂರು ; ತೋಟಕ್ಕೆ ಬಂದು ಉಪಟಳ ಕೊಡುತ್ತಿದೆ ಎಂದು ಕೋಣವೊಂದನ್ನು ಕೊಲೆ ಮಾಡಿಸಿದ ಮಾಲೀಕ ಸೇರಿ ಏಳು ಮಂದಿಯನ್ನು ಮಂಗಳೂರಿನ ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ತೋಟದ ಮಾಲೀಕ ಕೋಟೆಕಾರ್ ಗ್ರಾಮದ ಜಯರಾಮ ರೈ(58), ಮಲ್ಲೂರು ಗ್ರಾಮದ ಉಮ್ಮರ್ (37) ಮೊಹಮ್ಮದ್ ಸಿನಾನ್ (22), ಕೋಟೆಕಾರ್ ಗ್ರಾಮದ ಉಮ್ಮರ್ ಫಾರೂಕ್ (42), ಸೋಮೇಶ್ವರ ಗ್ರಾಮದ ಮುಹಮ್ಮದ್ ಸುಹೈಲ್(26), ಮುಹಮ್ಮದ್ ಕಲಂದರ್ (43), ಇಲ್ಯಾಸ್ (38) ಬಂಧಿತರು.
ನಗರದಲ್ಲಿ ಮಾತನಾಡಿದ ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್, ತೋಟಕ್ಕೆ ಬಂದು ಉಪಟಳ ಕೊಡುತ್ತಿದೆ ಎಂದು ತೋಟದ ಮಾಲೀಕ ತಂಡವೊಂದಕ್ಕೆ ಅದನ್ನು ಕೊಂದು ಮಾಂಸ ಮಾಡಿ ಮಾರಲು ಸೂಚಿಸಿದ್ದನು. ಅದರಂತೆ ಆರು ಮಂದಿ ಕಳೆದ ಎರಡು ದಿನಗಳಿಂದ ಅದನ್ನು ತೋಟದಲ್ಲಿ ಹಿಡಿಯಲು ಪ್ರಯತ್ನಿಸಿದ್ದಾರೆ.
ಆದರೆ, ಹಿಡಿಯಲು ಸಾಧ್ಯವಾಗದೆ ಇದ್ದಾಗ ಭಾನುವಾರದಂದು, ಕೊಡಗು ಮೂಲದ ವ್ಯಕ್ತಿಯ ಬಂದೂಕು ತಂದು ಅದರಿಂದ ಗುಂಡು ಹಾರಿಸಿದ್ದಾರೆ. ಗುಂಡು ತಗುಲಿ ಕೆಳಕ್ಕೆ ಬಿದ್ದ ಕೋಣವನ್ನು ಕಡಿದು ಕೊಂದಿದ್ದಾರೆ.
ಈ ಸಂದರ್ಭದಲ್ಲಿ ಕೋಣ ಜೋರಾಗಿ ಕೂಗಿದ ಶಬ್ಧಕ್ಕೆ ಸ್ಥಳೀಯರು ಬಂದು ನೋಡಿದಾಗ ಕೋಣವನ್ನು ಕೊಂದಿರುವುದು ತಿಳಿದು ಬಂದಿದೆ. ಜನರು ಸೇರಿದ್ದನ್ನು ನೋಡಿದ ಆರೋಪಿಗಳು ಪರಾರಿಯಾಗಿದ್ದರು. ಕೋಣದ ಮಾಂಸ ಮಾರಾಟ ಮಾಡುವ ಉದ್ದೇಶ ಹೊಂದಿದ್ದರು ಎಂದು ಕಮಿಷನರ್ ತಿಳಿಸಿದ್ದಾರೆ.
ಇದನ್ನೂ ಓದಿ:ಇನ್ಸ್ಪೆಕ್ಟರ್ ಪುತ್ರನ ಸೈಕಲ್ ಕಳ್ಳತನ : ಕೇಸ್ ಬೆನ್ನತ್ತಿ ಹೋದ ಪೊಲೀಸರು ಭೇದಿಸಿದ್ದು 9 ಪ್ರಕರಣ
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರಿಂದ ಬೊಲೆರೊ ಪಿಕಪ್ ವಾಹನ, ಸ್ಕೂಟರ್, ಎಸ್‌ಬಿಬಿಎಲ್ ಬಂದೂಕು, ಮಚ್ಚು, ಜೀವಂತ ಗುಂಡು, ಹಗ್ಗ, ಮಾಂಸ ಮಾಡಲು ಉಪಯೋಗಿಸುವ ಮರದ ತುಂಡು, ಪ್ಲಾಸ್ಟಿಕ್ ಗೋಣಿಚೀಲ ಮತ್ತಿತ್ತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಹತ್ಯೆಗೆ ಬಂದೂಕು ನೀಡಿದವನ ಶೋಧ ನಡೆಸಲಾಗುತ್ತಿದೆ ಎಂದು ಮಂಗಳೂರು ನಗರ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.