ಮಂಗಳೂರು: ಸುರತ್ಕಲ್ನ ಕಾಟಿಪಳ್ಳದಲ್ಲಿ ಮದರಸಾ ಬಿಟ್ಟು ಮನೆಗೆ ತೆರಳುತ್ತಿದ್ದ ಬಾಲಕನಿಗೆ ಹಲ್ಲೆ ನಡೆಸಲಾಗಿದೆ ಎಂಬ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಜೂನ್ 27 ರಂದು ಮದರಸಾ ಬಿಟ್ಟು ಮನೆಗೆ ತೆರಳುತ್ತಿದ್ದವನ ಮೇಲೆ ಬೈಕ್ನಲ್ಲಿ ಬಂದ ಇಬ್ಬರು ಎಳೆದಾಡಿ ಹಲ್ಲೆ ಮಾಡಿದ್ದಾರೆ ಎಂದು ಕಾಟಿಪಳ್ಳ ಆರನೇ ಬ್ಲಾಕ್ನಲ್ಲಿರುವ ತೌಯಿಬಾ ಮಸೀದಿಯ 6 ನೇ ತರಗತಿಯ ವಿದ್ಯಾರ್ಥಿ ಆರೋಪ ಮಾಡಿದ್ದ. ಇದರಿಂದ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಈ ಬಗ್ಗೆ ತನಿಖೆ ನಡೆಸಿದ ಪೊಲೀಸರಿಗೆ ಬಾಲಕ ಕಟ್ಟುಕಥೆ ಸೃಷ್ಟಿಸಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಮಾತನಾಡಿದ ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್, ಮದರಸಾದಿಂದ ತೆರಳುತ್ತಿದ್ದ ಬಾಲಕನಿಗೆ ಹಲ್ಲೆ ಮಾಡಿದ ವಿಚಾರ ಆತಂಕಕ್ಕೆ ಕಾರಣವಾಗಿತ್ತು. ಇದನ್ನು ಗಂಭೀರವಾಗಿ ತೆಗೆದುಕೊಂಡು ವಿಚಾರಣೆ ನಡೆಸಲಾಯಿತು. ಆ ಬಾಲಕನನ್ನು ವಿಚಾರಣೆ ನಡೆಸಿದ ಸಂದರ್ಭದಲ್ಲಿ ಆತ ತಾನು ಓದುವುದರಲ್ಲಿ ಹಿಂದೆ ಇರುವುದು, ಶಾಲೆಯಲ್ಲಿ ಸ್ನೇಹಿತರಿಲ್ಲದಿರುವುದು, ಕಪ್ಪಗಿರುವ ಕಾರಣ ಸ್ನೇಹಿತರು ದೂರ ಮಾಡಿರುವುದು, ಮನೆಯಲ್ಲಿ ಬಡತನ ಇದ್ದು, ತಂದೆ ತಾಯಿ ಕಷ್ಟಪಟ್ಟು ಓದಿಸಿದರೂ ಓದಲು ಆಗದೆ ಇರುವುದು ಹಾಗೂ ಸೈಕಲ್ ಇಲ್ಲದೆ ಸ್ನೇಹಿತರು ಹತ್ತಿರ ಬರುವುದಿಲ್ಲ ಎಂಬೆಲ್ಲ ಕಾರಣದಿಂದ ಈ ರೀತಿ ಮಾಡಿರುವುದಾಗಿ ತಿಳಿಸಿದ್ದಾನೆ. ತನ್ನ ಬ್ಯಾಗ್ನಲ್ಲಿದ್ದ ಪೆನ್ ನಿಂದ ತಾನೇ ಶರ್ಟ್ ಹರಿದು ತನ್ನ ಮೇಲೆ ಹಲ್ಲೆಯಾಗಿದೆ ಎಂದು ಹೇಳಿದ್ದಾನೆ ಎಂದು ತಿಳಿಸಿದರು.
ಈ ಪ್ರಕರಣದ ಹಿನ್ನೆಲೆಯಲ್ಲಿ ಮದರಸಾ ಕಮಿಟಿಯವರು ಆತಂಕ ವ್ಯಕ್ತಪಡಿಸಿದ್ದರು ಮತ್ತು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಕೋಮುದ್ವೇಷಕ್ಕೆ ಕಾರಣವಾಗುವಂತೆ ಬರೆದಿದ್ದರು. ಇದೀಗ ಈ ಪ್ರಕರಣ ಸುಕಾಂತ್ಯ ಕಂಡಿದೆ. ಈ ಬಾಲಕನನ್ನು ಚೈಲ್ಡ್ ವೆಲ್ಫೇರ್ ಕಮಿಟಿ ಮತ್ತು ವೈದ್ಯರ ಮುಂದೆ ಹೇಳಿಕೆ ಪಡೆದುಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದರು.
ಇದನ್ನೂ ಓದಿ: ಅಗ್ನಿಪಥ್ ಯೋಜನೆ ವಿರುದ್ಧ ನಿರ್ಣಯ ಅಂಗೀಕರಿಸಿದ ಪಂಜಾಬ್ ಸರ್ಕಾರ