ಮಂಗಳೂರು: ಕೇಂದ್ರ ಸರಕಾರದ ಕೃಷಿ ಕಾಯಿದೆ ವಿರೋಧಿಸಿ ಇಂದು ಕರೆ ನೀಡಿರುವ ಭಾರತ ಬಂದ್ಗೆ ಮಂಗಳೂರಿನಲ್ಲಿ ಬೆಂಬಲ ವ್ಯಕ್ತವಾಗಿಲ್ಲ. ಭಾರತ್ ಬಂದ್ ಕರೆ ಕೊಟ್ಟರೂ ಜಿಲ್ಲೆಯಲ್ಲಿ ಜನಸಂಚಾರ, ವಾಹನ ಸಂಚಾರ ನಿರಾಳವಾಗಿ ನಡೆಯುತ್ತಿದೆ. ಬಸ್ಗಳ ಓಡಾಟ, ರಿಕ್ಷಾಗಳ ಓಡಾಟ, ಖಾಸಗಿ ವಾಹನಗಳ ಓಡಾಟ ನಿರಾತಂಕವಾಗಿದ್ದು, ಸಾರ್ವಜನಿಕರಿಗೆ ಬಂದ್ನ ಬಿಸಿ ತಟ್ಟಿಲ್ಲ.
ಇನ್ನು ಭಾರತ ಬಂದ್ ಬೆಂಬಲಿಸಿ ಮಂಗಳೂರಿನ ಬಂದರ್ ನ ಕಾರ್ಮಿಕರ ಕಟ್ಟೆ ಬಳಿ ಬಂದರು ಶ್ರಮಿಕರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಈ ಪ್ರತಿಭಟನೆಯಲ್ಲಿ ಕೃಷಿ ಕಾಯ್ದೆ ಮತ್ತು ಕಾರ್ಮಿಕ ಕಾಯ್ದೆ ಹಿಂಪಡೆಯಲು ಒತ್ತಾಯಿಸಿದರು.
ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಶನ್ ಅಧ್ಯಕ್ಷ ಮಹಾಂತೇಶ್, ಕೃಷಿ ಕಾಯಿದೆ ಜಾರಿಯಾದರೆ ಕೃಷಿ ಮಾರುಕಟ್ಟೆಗಳು ಖಾಸಗಿ ಪಾಲಾಗಲಿದ್ದು, ರೈತರು ಮತ್ತು ಕೃಷಿ ಕಾರ್ಮಿಕರು ಸಂಕಷ್ಟಕ್ಕೊಳಗಾಗಲಿದ್ದಾರೆ ಎಂದರು. ಪ್ರತಿಭಟನೆಯ ನೇತೃತ್ವವನ್ನು ಬಂದರು ಶ್ರಮಿಕರ ಸಂಘದ ಮುಖಂಡ ಬಿ ಕೆ ಇಮ್ತಿಯಾಝ್ ಮೊದಲಾದವರು ಭಾಗವಹಿಸಿದ್ದರು.