ಸುಳ್ಯ (ದಕ್ಷಿಣ ಕನ್ನಡ): ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ನಡೆದ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಯನ್ನು ಬಾಲಿವುಡ್ ಚಿತ್ರ ನಿರ್ಮಾಪಕ ಹಾಗೂ ಉದ್ಯಮಿ ಮನೀಶ್ ಮುಂದ್ರಾ ಖಂಡಿಸಿ, ಮೃತರ ಕುಟುಂಬಕ್ಕೆ 11 ಲಕ್ಷ ರೂ. ನೆರವು ನೀಡಿರುವುದಾಗಿ ಪ್ರಕಟಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿ ಮನೀಶ್ ಮುಂದ್ರಾ ಮಾಹಿತಿ ನೀಡಿದ್ದಾರೆ. ಪ್ರವೀಣ್ ಕುಟುಂಬದ ಬ್ಯಾಂಕ್ ಖಾತೆಯ ಮಾಹಿತಿಯನ್ನು ಇತ್ತೀಚೆಗಷ್ಟೇ ಅವರು ಟ್ವಿಟರ್‌ನಲ್ಲಿ ಕೇಳಿಕೊಂಡಿದ್ದರು. ಆ ಬಳಿಕ ಇದೀಗ 11 ಲಕ್ಷ ರೂಪಾಯಿ ಹಣವನ್ನು ಪ್ರವೀಣ್ ಅವರ ಪತ್ನಿ ನೂತನಾ ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಿರುವುದಾಗಿ ಟ್ವೀಟ್ ಮಾಡಿ ತಿಳಿಸಿದ್ದಾರೆ.
ಮನೀಶ್ ಮುಂದ್ರಾ ಅವರ 2017 ರಲ್ಲಿ ನಿರ್ಮಾಣವಾದ ಧನಕ್ ಎಂಬ ಚಿತ್ರ ಅತ್ಯುತ್ತಮ ಮಕ್ಕಳ ಚಲನಚಿತ್ರ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿಗೆ ಭಾಜನವಾಗಿತ್ತು. ಅಲ್ಲದೆ ನ್ಯೂಟನ್ ಎಂಬ ಚಿತ್ರ ಆಸ್ಕರ್ ಪ್ರಶಸ್ತಿಗೆ ಪ್ರವೇಶ ಪಡೆದಿತ್ತು.
2014ರಲ್ಲಿ ದೃಶ್ಯಂ ಫಿಲ್ಮ್ಸ್, ಪ್ರೊಡಕ್ಷನ್ ಹೌಸ್ ಪ್ರಾರಂಭಿಸಿದ ಮನೀಶ್ ಮುಂದ್ರಾ ಅವರು ಮಸಾನ್ (2015), ವೇಟಿಂಗ್ (2016), ಉಮ್ರಿಕಾ (2016), ಧನಕ್ (2016), ನ್ಯೂಟನ್ (2017), ರುಖ್ (2017), ಕದ್ವಿ ಹವಾ(2017) ಪ್ರಸಿದ್ಧ ಚಲನಚಿತ್ರಗಳನ್ನು ನಿರ್ಮಿಸಿದ್ದರು. ಮನೀಶ್ ಮುಂದ್ರಾ ಅವರು ಕೊರೊನಾ ಸಮಯದಲ್ಲಿ ಪಿಪಿಇ ಕಿಟ್‌ಗಳೊಂದಿಗೆ ಭಾರತದಲ್ಲಿನ ಆಸ್ಪತ್ರೆಗಳಿಗೆ ಸಹಾಯ ಮಾಡಿದ್ದರು.
ಪ್ರವೀಣ್ ನೆಟ್ಟಾರು ಹತ್ಯೆ: ಜುಲೈ 26 ರಂದು ರಾತ್ರಿ 8 ಗಂಟೆ ಸುಮಾರಿಗೆ ಪ್ರವೀಣ್ ಬೈಕ್‌ನಲ್ಲಿ ಮನೆಗೆ ಹೊರಡಲು ಸಿದ್ಧರಾಗಿದ್ದಾಗ ಬೈಕ್‌ನಲ್ಲಿ ಆಗಮಿಸಿದ ಮುಸುಕುಧಾರಿಗಳು ಮಾರಕಾಸ್ತ್ರಗಳಿಂದ ದಾಳಿ ಮಾಡಿ ಹತ್ಯೆ ಮಾಡಿದ್ದರು. ಈ ಪ್ರಕರಣದ ತನಿಖೆಯನ್ನು ಕರ್ನಾಟಕ ಸರ್ಕಾರದ ಶಿಫಾರಸ್ಸಿನ ಮೇರೆಗೆ ಕೇಂದ್ರ ಸರ್ಕಾರದ ಗೃಹ ಸಚಿವಾಲಯವು ರಾಷ್ಟ್ರೀಯ ತನಿಖಾ ದಳ ವಹಿಸಿಕೊಳ್ಳುವಂತೆ ಆದೇಶಿಸಿದೆ.
ಬಿಜೆಪಿ, ಸರ್ಕಾರದಿಂದ ತಲಾ 25 ಲಕ್ಷ: ಪ್ರವೀಣ್ ಕುಟುಂಬಕ್ಕೆ ಬಿಜೆಪಿ ಹಾಗೂ ಕರ್ನಾಟಕ ಸರ್ಕಾರ ತಲಾ 25 ಲಕ್ಷ ರೂ ಹಸ್ತಾಂತರಿಸಿದೆ. ಹಾಗೆಯೇ ಸಚಿವ ನಾರಾಯಣ್ ಅವರು 10 ಲಕ್ಷ ಕೊಡುವುದಾಗಿ ಘೋಷಿಸಿಕೊಂಡಿದ್ದಾರೆ.
(ಓದಿ: ಪ್ರವೀಣ್ ನೆಟ್ಟಾರು ಮನೆಗೆ ಸಿಎಂ ಭೇಟಿ.. ಕುಟುಂಬಕ್ಕೆ ರೂ 25 ಲಕ್ಷ ಪರಿಹಾರದ ಚೆಕ್ ಹಸ್ತಾಂತರ)