ಮಂಗಳೂರು : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ಪ್ರತಿದಿನ ಒಂದು ಕೋಟಿ ರೂ.ಗಳಷ್ಟು ನಷ್ಟ ಅನುಭವಿಸುತ್ತಿದೆ. ಇದನ್ನು ಸರ್ಕಾರ ಸರಿದೂಗಿಸುವ ಕಾರ್ಯ ಮಾಡುತ್ತಿದೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದರು.
ಮಂಗಳೂರು ಪ್ರವಾಸ ವೇಳೆ ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಬ್ಯಾಂಕಿಗೆ ಭೇಟಿ ನೀಡಿ ಬ್ಯಾಂಕಿನಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಈ ಹಿಂದೆ ಬಿಎಂಟಿಸಿಯಲ್ಲಿ 50 ಲಕ್ಷಕ್ಕೂ ಹೆಚ್ಚು ಮಂದಿ ಪ್ರತಿದಿನ ಸಂಚರಿಸುತ್ತಿದ್ದರು. ಆದರೆ, ಈಗ 35 ಲಕ್ಷ ಮಂದಿ ಸಂಚರಿಸುತ್ತಿದ್ದಾರೆ. ಉಳಿದ 15 ಲಕ್ಷ ಮಂದಿ ಕ್ಯಾಬ್, ಮೆಟ್ರೋ ಮೊದಲಾದವುಗಳನ್ನು ಅವಲಂಬಿಸಿದ್ದಾರೆ.
ಇದರಿಂದಾಗಿ ಬಿಎಂಟಿಸಿ ಪ್ರತಿದಿನ ನಷ್ಟ ಅನುಭವಿಸುತ್ತಿದೆ. ಬಿಎಂಟಿಸಿಗೆ ಲಾಭ ಮಾಡುವ ಉದ್ದೇಶಕ್ಕಿಂತ ಮಧ್ಯಮ, ಬಡವರ್ಗದವರಿಗೆ ಕಡಿಮೆ ದರದಲ್ಲಿ ಪ್ರಯಾಣ ವ್ಯವಸ್ಥೆ ಮಾಡುವ ಉದ್ದೇಶ ಇದೆ. ಬಿಎಂಟಿಸಿಗೆ ಆಗುವ ನಷ್ಟವನ್ನು ಸರ್ಕಾರದಿಂದ ಭರಿಸಲಾಗುವುದೆಂದು ಹೇಳಿದರು.
ರಾಜ್ಯದ 21 ಮಧ್ಯವರ್ತಿ ಬ್ಯಾಂಕ್ಗಳಲ್ಲಿ ದ.ಕ ಜಿಲ್ಲಾ ಸಹಕಾರಿ ಬ್ಯಾಂಕ್ ಮೊದಲ ಸ್ಥಾನದಲ್ಲಿದೆ. ರಾಜ್ಯದಲ್ಲಿ ಸಕ್ಕರೆ ಕಾರ್ಖಾನೆ ಆರಂಭವಾಗಲು ದ.ಕ. ಜಿಲ್ಲಾ ಸಹಕಾರಿ ಬ್ಯಾಂಕ್ ಮತ್ತು ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಕೊಡುಗೆ ಅಪಾರವಿದೆ ಎಂದು ಇದೇ ವೇಳೆ ಶ್ಲಾಘಿಸಿದರು.