ಮಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿ 189 ಕ್ಷೇತ್ರಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಬಿಜೆಪಿಯ ಭದ್ರಕೋಟೆಯಾಗಿರುವ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಭಾರಿ ಬದಲಾವಣೆ ಮಾಡಲಾಗಿದೆ.
ರಾಜ್ಯದಲ್ಲೂ ಗುಜರಾತ್, ಯುಪಿ ಮಾದರಿ ಟಿಕೆಟ್ ಘೋಷಣೆ.. ಈ ಬಾರಿಯ ಚುನಾವಣೆಯಲ್ಲಿ ಅಭ್ಯರ್ಥಿ ಘೋಷಣೆ ಮಾಡುವಾಗ ಉತ್ತರ ಪ್ರದೇಶ, ಗುಜರಾತ್ ವಿಧಾನಸಭಾ ಚುನಾವಣಾ ವೇಳೆ ಬಿಜೆಪಿ ಅನುಸರಿಸಿದಂತೆ ಹಾಲಿ ಶಾಸಕರಿಗೆ ಟಿಕೆಟ್ ನೀಡದಿರುವ ತಂತ್ರಗಾರಿಕೆಯನ್ನು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಮಾಡಲಾಗಿದೆ. ರಾಜಕೀಯ ಲೆಕ್ಕಾಚಾರವನ್ನಿಟ್ಟು ಈ ಕರಾವಳಿ ಜಿಲ್ಲೆಯಲ್ಲಿ ಐದು ಮಂದಿ ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂಟು ವಿಧಾನಸಭಾ ಕ್ಷೇತ್ರದಲ್ಲಿ ಏಳು ಮಂದಿ ಬಿಜೆಪಿ ಶಾಸಕರಿದ್ದರು. ಈ ಏಳು ಮಂದಿ ಬಿಜೆಪಿ ಶಾಸಕರಲ್ಲಿ ಇಬ್ಬರಿಗೆ ಟಿಕೆಟ್ ನಿರಾಕರಿಸಲಾಗಿದೆ. ಸಚಿವರಾಗಿರುವ , ಸುಳ್ಯ ಕ್ಷೇತ್ರದ ಶಾಸಕ ಅಂಗಾರ ಮತ್ತು ಪುತ್ತೂರು ಕ್ಷೇತ್ರದ ಶಾಸಕ ಸಂಜೀವ ಮಠಂದೂರು ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಅಭ್ಯರ್ಥಿಗಳ ಪಟ್ಟಿ..
1. ಮಂಗಳೂರು - ಸತೀಶ್ ಕುಂಪಲ
2. ಮಂಗಳೂರು ದಕ್ಷಿಣ- ವೇದವ್ಯಾಸ ಕಾಮತ್
3. ಮಂಗಳೂರು ಉತ್ತರ- ಭರತ್ ಶೆಟ್ಟಿ
4. ಮೂಡಬಿದಿರೆ- ಉಮಾನಾಥ ಕೋಟ್ಯಾನ್
5. ಬಂಟ್ವಾಳ- ರಾಜೇಶ್ ನಾಯ್ಕ್
6. ಬೆಳ್ತಂಗಡಿ- ಹರೀಶ್ ಪೂಂಜಾ
7. ಪುತ್ತೂರು- ಆಶಾ ತಿಮ್ಮಪ್ಪ
8. ಸುಳ್ಯ- ಭಾಗಿರಥಿ ಮುರುಳ್ಯ
ಉಡುಪಿ ಜಿಲ್ಲೆಯಲ್ಲಿ ಐದು ವಿಧಾನಸಭಾ ಕ್ಷೇತ್ರದಲ್ಲಿ ಐದು ಕಡೆಯೂ ಬಿಜೆಪಿ ಶಾಸಕರಿದ್ದಾರೆ. ಇದರಲ್ಲಿ ಮಂಗಳವಾರ ನಾಲ್ಕು ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ನಾಲ್ಕು ಕ್ಷೇತ್ರದಲ್ಲಿ ಮೂವರನ್ನು ಬದಲಾವಣೆ ಮಾಡಿರುವುದು ವಿಶೇಷ. ಉಡುಪಿ ಕ್ಷೇತ್ರದ ಶಾಸಕ ರಘುಪತಿ ಭಟ್, ಕಾಪು ಕ್ಷೇತ್ರದ ಶಾಸಕ ಲಾಲಾಜಿ ಆರ್ ಮೆಂಡನ್, ಕುಂದಾಪುರ ಕ್ಷೇತ್ರದ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಅವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಹಿನ್ನೆಲೆ ಬೇರೆಯವರಿಗೆ ಟಿಕೆಟ್ ನೀಡಲಾಗಿದೆ.
ಉಡುಪಿ ಜಿಲ್ಲೆಯ ಬಿಜೆಪಿ ಅಭ್ಯರ್ಥಿಗಳ ಪಟ್ಟಿ
1. ಉಡುಪಿ- ಯಶ್ ಪಾಲ್ ಸುವರ್ಣ
2. ಕಾಪು- ಸುರೇಶ್ ಶೆಟ್ಟಿ ಗುರ್ಮೆ
3. ಕುಂದಾಪುರ- ಕಿರಣ್ ಕುಮಾರ್ ಕೊಡ್ಗಿ
4. ಕಾರ್ಕಳ- ಸುನಿಲ್ ಕುಮಾರ್
ಹೊಸ ಪ್ರಯೋಗಕ್ಕೆ ಕಾರಣ ಏನು? ದಕ್ಷಿಣ ಕನ್ನಡ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರದಲ್ಲಿರುವ ಹಾಲಿ ಶಾಸಕರಲ್ಲಿ ಇಬ್ಬರಿಗೆ ಟಿಕೆಟ್ ನಿರಾಕರಿಸಲಾಗಿದೆ. ಅದರಲ್ಲಿ ಒಬ್ಬರು ಸಚಿವರೆನ್ನುವುದು ವಿಶೇಷ. ಬಿಜೆಪಿ ಹೈಕಮಾಂಡ್ ಈ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು ಎಂಬುದನ್ನು ನೋಡುವುದಾದರೆ ಹಾಲಿ ಶಾಸಕರ ಮೇಲೆ ಕಾರ್ಯಕರ್ತರ ಅಸಮಾಧಾನವೇ ಕಾರಣವಾಯಿತೇ ಎನ್ನುವ ಅನುಮಾನ ವ್ಯಕ್ತವಾಗಿದೆ.
ಸಚಿವ ಅಂಗಾರ ಅವರು ಕಳೆದ 6 ಬಾರಿ ಸುಳ್ಯ ಕ್ಷೇತ್ರ ಪ್ರತಿನಿಧಿಸಿದ್ದಾರೆ. ಅಭಿವೃದ್ಧಿ ವಿಷಯವಾಗಿ ಅಂಗಾರ ಅವರಿಗೆ ಟಿಕೆಟ್ ನೀಡಬಾರದು ಎಂದು ಕೂಗು ಎದ್ದಿತ್ತು. ಇದನ್ನು ಪರಿಗಣಿಸಿ ಮೀಸಲು ಕ್ಷೇತ್ರವಾಗಿರುವ ಸುಳ್ಯದಲ್ಲಿ ಭಾಗೀರಥಿ ಮುರುಳ್ಯ ಅವರಿಗೆ ಟಿಕೆಟ್ ನೀಡಲಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ.
ಪುತ್ತೂರಿನಲ್ಲಿ ಶಾಸಕ ಸಂಜೀವ ಮಠಂದೂರು ಬದಲಿಗೆ ಅರುಣ್ ಕುಮಾರ್ ಪುತ್ತಿಲಗೆ ಟಿಕೆಟ್ ನೀಡಬೇಕು ಎಂಬ ಕೂಗು ಕೇಳಿಬಂದಿತ್ತು. ಆದರೆ ಪುತ್ತೂರು ಸುಳ್ಯ, ಬೆಳ್ತಂಗಡಿಯಲ್ಲಿ ಗೌಡ ಸಮುದಾಯ ಪ್ರಬಲವಾಗಿದ್ದು, ಈ ಸಮುದಾಯವನ್ನು ಗಮನದಲ್ಲಿಟ್ಟುಕೊಂಡು ಗೌಡ ಸಮುದಾಯದ ಆಶಾ ತಿಮ್ಮಪ್ಪ ಅವರಿಗೆ ಪುತ್ತೂರು ಕ್ಷೇತ್ರದ ಟಿಕೆಟ್ ಘೋಷಿಸಲಾಗಿದೆ.
ಇನ್ನು ಉಡುಪಿ ಜಿಲ್ಲೆಯಲ್ಲಿ ಕುಂದಾಪುರ ಕ್ಷೇತ್ರದ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದರು. ಹೀಗಾಗಿ ಇವರಿಂದ ತೆರವಾದ ಕ್ಷೇತ್ರಕ್ಕೆ ಕಿರಣ್ ಕುಮಾರ್ ಕೊಡ್ಗಿಗೆ ಟಿಕೆಟ್ ನೀಡಲಾಗಿದೆ. ಇನ್ನೊಂದು ಕಡೆ ಕಾಪು ಕ್ಷೇತ್ರದಲ್ಲಿ ಶಾಸಕರಾಗಿದ್ದ, ಮೊಗವೀರ ಸಮುದಾಯದ ಲಾಲಾಜಿ ಆರ್ ಮೆಂಡನ್ ಅವರ ಬದಲಿಗೆ ಬಂಟ ಸಮುದಾಯದ ಗುರ್ಮೆ ಸುರೇಶ್ ಶೆಟ್ಟಿ ಅವರಿಗೆ ಕೊಡಲಾಗಿದೆ. ಕುಂದಾಪುರದಲ್ಲಿ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಅವರಿಂದ ತೆರವಾದ ಬಂಟ ಸಮುದಾಯದ ಪ್ರಾತಿನಿಧ್ಯವನ್ನು ಕಾಪು ಕ್ಷೇತ್ರದಲ್ಲಿ ನೀಡಲಾಗಿದೆ.
ಯಾರು ಈ ಯಶ್ಪಾಲ್ ಸುವರ್ಣ: ಕುಂದಾಪುರದಲ್ಲಿ ಈಗಾಗಲೇ ಬ್ರಾಹ್ಮಣರಿಗೆ ಟಿಕೆಟ್ ನೀಡಿರುವುದರಿಂದ ಉಡುಪಿಯಲ್ಲಿ ರಘುಪತಿ ಭಟ್ಗೆ ಟಿಕೆಟ್ ನಿರಾಕರಿಸಿ ಮೊಗವೀರ ಸಮುದಾಯದ ಯಶ್ ಪಾಲ್ ಸುವರ್ಣ ಅವರಿಗೆ ಟಿಕೆಟ್ ಘೋಷಿಸಲಾಗಿದೆ. ಯಶ್ಪಾಲ್ ಸುವರ್ಣ ಅವರು ಉಡುಪಿಯ ಸರಕಾರಿ ಪಿಯು ಬಾಲಕಿಯರ ಕಾಲೇಜು ಅಭಿವದ್ಧಿ ಸಮಿತಿ ಉಪಾಧ್ಯಕ್ಷರಾಗಿದ್ದರು. ಹಿಜಾಬ್ ವಿರೋದಿ ಹೋರಾಟದಲ್ಲಿ ಪ್ರಮುಖವಾಗಿ ಸುವರ್ಣ ಗುರುತಿಸಿಕೊಂಡಿದ್ದರು. ಹಿಜಾಬ್ ವಿರುದ್ಧ ಗಟ್ಟಿಧ್ಬನಿ ಎತ್ತಿದವರಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು. ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷರಾಗಿದ್ದ ರಘುಪತಿ ಭಟ್ ಸಹ ಮುಂಚೂಣಿಯಲ್ಲಿದ್ದರು ಸಹ ಈ ಬಾರಿ ಸುವರ್ಣ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಪಕ್ಷದ ರಾಷ್ಟ್ರೀಯ ಹಿಂದುಳಿದ ವರ್ಗಗಳ ಮೋರ್ಚಾ ಪ್ರಧಾನ ಕಾರ್ಯದರ್ಶಿ ಆಗಿರುವ ಇವರು ಮಹಾಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
-
My Sincere Thanks to all the Senior Leaders for giving me an opportunity to Contest from #Udupi Constituency. Looking forward for Continued Support from Udupians 🙏#BJP4Udupi @JPNadda @blsanthosh @narendramodi @AmitShah @ArunSinghbjp @nalinkateel @ShobhaBJP @BSYBJP @drlaxmanbjp pic.twitter.com/dvW92NGLmW
— Yashpal Anand Suvarna (@YashpalBJP) April 11, 2023 " class="align-text-top noRightClick twitterSection" data="
">My Sincere Thanks to all the Senior Leaders for giving me an opportunity to Contest from #Udupi Constituency. Looking forward for Continued Support from Udupians 🙏#BJP4Udupi @JPNadda @blsanthosh @narendramodi @AmitShah @ArunSinghbjp @nalinkateel @ShobhaBJP @BSYBJP @drlaxmanbjp pic.twitter.com/dvW92NGLmW
— Yashpal Anand Suvarna (@YashpalBJP) April 11, 2023My Sincere Thanks to all the Senior Leaders for giving me an opportunity to Contest from #Udupi Constituency. Looking forward for Continued Support from Udupians 🙏#BJP4Udupi @JPNadda @blsanthosh @narendramodi @AmitShah @ArunSinghbjp @nalinkateel @ShobhaBJP @BSYBJP @drlaxmanbjp pic.twitter.com/dvW92NGLmW
— Yashpal Anand Suvarna (@YashpalBJP) April 11, 2023
ಬಿಜೆಪಿ ಭದ್ರಕೋಟೆಯಾಗಿರುವ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಐವರು ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿದೆ. ಹೊಸ ಪ್ರಯೋಗಕ್ಕೆ ಮುಂದಾಗಿರುವ ಬಿಜೆಪಿ ಇಬ್ಬರು ಮಹಿಳೆಯರು ಸೇರಿದಂತೆ ಐವರು ಹೊಸ ಮುಖಗಳನ್ನು ಪರಿಚಯಿಸಿದೆ. ಈ ಪ್ರಯೋಗ ಯಶಸ್ವಿಯಾಗಲಿದೆಯಾ ಎಂಬುದು ಚುನಾವಣಾ ಫಲಿತಾಂಶದ ದಿನವೇ ಗೊತ್ತಾಗಲಿದೆ.
ಇದನ್ನು ಓದಿ:ವಿಜಯಪುರ ನಗರ ಕ್ಷೇತ್ರಕ್ಕೆ ಯತ್ನಾಳ್.. ಪಟ್ಟಣಶೆಟ್ಟಿಗೆ ಕೈ ತಪ್ಪಿದ ಟಿಕೆಟ್